ಒಳಸುರಿಕೆ ವಿಜ್ಞಾನ: ಒಳಸುರಿಕ ಗ್ರಂಥಿಗಳ ರಚನೆ, ನಿಜಗೆಲಸ, ಆರೋಗ್ಯ ಮತ್ತು ರೋಗಗಳನ್ನು ತಿಳಿಸಿಕೊಡುವ ವಿಜ್ಞಾನ (ಎಂಡೊಕ್ರಿನಾಲಜಿ). ತೆಮಡಿಕ (ಪಿಟ್ಯುಟರಿ), ಗುರಾಣಿಕ (ತೈರಾಯ್ಡ್‌), ಮಾಂಸಲಿ (ಪ್ಯಾಂಕ್ರಿಯಾಸ್), ಅಡ್ರಿನಲುಗಳೂ, ಬದಿಗುರಾಣಿಕಗಳು (ಪ್ಯಾರತೈರಾಯ್ಡ್‌ಸ್), ಅಂಡಾಶಯಗಳು (ಓವರೀಸ್). ತರಡುಗಳು (ಟೆಸ್ಟೀಸ್). ಮಾಸು (ಪ್ಲೆಸೆಂಟ) ಇವಿಷ್ಟು ಈಗ ಗೊತ್ತಿರುವ ಮುಖ್ಯವಾದ ಒಳಸುರಿಕ ಗ್ರಂಥಿಗಳು. ಜೊಲ್ಲು, ಕಣ್ಣೀರು ಗ್ರಂಥಿಗಳು ರಸಗಳನ್ನು ನಾಳಗಳ ಮೂಲಕ ಸುರಿಸುತ್ತವೆ. ಆದರೆ ಮೇಲೆ ಹೇಳಿದ ಒಳಸುರಿಕ ಗ್ರಂಥಿಗಳು ರಸಗಳನ್ನು ನೇರವಾಗಿ ರಕ್ತದೊಳಕ್ಕೇ ಸುರಿದುಬಿಡುತ್ತವೆ. ಇವು ತಯಾರಿಸಿದ ರಸಗಳಿಗೆ ಚೋದನಿಕಗಳು (ಹಾರ್ಮೋನ್ಸ್‌) ಎಂದು ಹೆಸರು. ಇನ್ನೆಲ್ಲೊ ದೂರದ ಅಂಗಗಳ ಊತಕಗಳಲ್ಲಿ ಪ್ರಭಾವ ತೋರುವುದರಿಂದ ಇವನ್ನು ರಸದೂತಗಳು ಎನ್ನುವುದೂ ಉಂಟು. ರಕ್ತದಲ್ಲಿನ ಬಲು ಕಿರಿಯ ಪ್ರಮಾಣಗಳಲ್ಲಿ ಹಲವಾರು ಅಂಗಗಳ ಇಲ್ಲವೇ ಇಡೀ ಮೈಮೇಲೆ ಪ್ರಭಾವ ತೋರುವುದು ಹೆಚ್ಚಳಿಕೆ. (ನೋಡಿ- ಚೋದನಿಕಗಳು).

ಚೋದನಿಕಗಳ ನಿಜಗೆಲಸಗಳು ಹಲವಾರಿವೆ. ಮೈ ಬೆಳೆವಣಿಗೆಯ ಹತೋಟಿ, ಜನನಾಂಗಗಳ ಲಿಂಗದ ಸುರಿಕೆಗಳಿಂದ ಗಂಡು ಹೆಣ್ಣುಗಳ ಮರುಚಲನ ಲಿಂಗ ಗುಣಗಳನ್ನು (ಸೆಕೆಂಡರಿ ಸೆಕ್ಸ್‌ ಕ್ಯಾರೆಕ್ಟರ್ಸ್) ಬೆಳೆಸಿ ನೆರೆವಂತೆ ಮಾಡುವುದೂ ಮುಖ್ಯ. ಇಡೀ ಜೀವಿಯ ಮೈಯೊಳಗಿನ ಆವರಣದಲ್ಲಿ ಏರುಪೇರಿಲ್ಲದಂತೆ ಒಂದೇ ಸಮನಾಗಿ ಇರಿಸುವುದೂ ಒಂದು ಮುಖ್ಯ ನಿಜಗೆಲಸ. ಇದಕ್ಕೆ ಸಮನಿಲುವೆ (ಹೋಮಿಯೊ ಸ್ಟೇಸಿಸ್) ಎಂದಿದೆ. ಒಳಸುರಿಕೆ ಗ್ರಂಥಿಗಳು ಈ ನಿಜಗೆಲಸಗಳಲ್ಲಿ ಒಂದಿಲ್ಲೊಂದು ರೀತಿಯಲ್ಲಿ ನೆರವಾಗುತ್ತವೆ. ಗಂಡಿನ ಚೋದನಿಕ ಗಂಡಿನ ಗುಣವನ್ನು ಹೊರದೋರುವಂತೆ ಮಾಡುವುದೇ ಅಲ್ಲದೆ, ಮೈಬೆಳೆತಕ್ಕೂ ಕಾರಣವಾಗಿರುತ್ತದೆ. ಇವು ಯಾವುವೂ ತಾವಾಗಿ ಯಾವ ಕೆಲಸವನ್ನೂ ಮೊದಲಿಡದಿದ್ದರೂ ಬೇರೆ ಅಂಗಗಳ ಕೆಲಸಗಳನ್ನು ನಿಯಂತ್ರಿಸುವುವು. ಈ ಅಂಕೆಯ ಗುಟ್ಟು ಏನೆಂದು ಚೆನ್ನಾಗಿ ಗೊತ್ತಿಲ್ಲವಾದರೂ ಜೀವಕಣಗಳಲ್ಲಿನ ಜೀವವೈಜ್ಞಾನಿಕ ಪ್ರತಿಕ್ರಿಯೆಗಳನ್ನು ಚೋದಿಸಿ ಇಲ್ಲವೇ ಕುಂದಿಸಿ ಕೆಲಸ ಮಾಡುತ್ತವೆ ಎನ್ನಬಹುದು.

ರಕ್ತದಲ್ಲಿನ ಸುತ್ತಿಡುವ ಚೋದನಿಕಗಳ ಪ್ರಮಾಣ ಅವುಗಳ ಹುಟ್ಟು, ಹೊರದೂಡಿಕೆ ಇಲ್ಲವೇ ಚುರುಕಿಳಿತಗಳಿಗೆ ತಕ್ಕಂತೆ ಇರುವುದು. ಇದೇ ಅಲ್ಲದೆ, ಚೋದನಿಕದ ಬೇಡಿಕೆಯೂ ಊತಕಗಳ ಈಡುವಳಿಯೂ ಆಗಾಗ್ಗೆ ಹೆಚ್ಚು ಕಡಿಮೆ ಆಗುತ್ತಿರುವುದರಿಂದ ಸುರಿಕೆಯ ಹತೋಟಿ ಬಲು ಚೆನ್ನಾಗಿರುವುದು. ಅಡ್ರಿನಲ್ ಗ್ರಂಥಿಸುರಿಕೆ ಹಗಲೂ ರಾತ್ರಿ ಬದಲಾಗುತ್ತಿರುವುದು. ಬೆಳಗಿನಲ್ಲಿ ಕಡಿಮೆ ಇದ್ದದು ಸಂಜೆ ಹೊತ್ತಿಗೆ ತೀರ ಹೆಚ್ಚಾಗುತ್ತದೆ. ಮಾಂಸಲಿಯ ಒಳಸುರಿತ ಆಹಾರದಲ್ಲಿನ ಹಿಟ್ಟು ಸಕ್ಕರೆಗಳ ಪ್ರಮಾಣಕ್ಕೆ ತಕ್ಕಂತಿರುವುದು. ಬಸಿರು ಇಲ್ಲವೇ ಮುಟ್ಟಿನ ಚಕ್ರವನ್ನು ಅಂಡಾಶಯ ಸುರಿತಗಳು ಅನುಸರಿಸುತ್ತವೆ. ಚೋದನಿಕಗಳ ಸುರಿಕೆಯ ಹತೋಟಿಯಲ್ಲಿ ಎರಡು ಬಗೆಗಳಿವೆ. ಮೊದಲಿನದಾಗಿ, ಹಿಂದುಂಬುವ ಯಾಂತ್ರಿಕ (ಫೀಡ್ ಬ್ಯಾಕ್ ಮೆಕ್ಯಾನಿಸಂ) ವಿಧಾನವಿದೆ. ರಕ್ತದಲ್ಲಿ ಸುತ್ತಾಡುತ್ತಿರುವ ಚೋದನಿಕದ ಪ್ರಮಾಣ, ಅದೇ ಚೋದನಿಕದ ಉತ್ಪತ್ತಿಯನ್ನು ಅಂಕೆಯಲ್ಲಿಡುತ್ತದೆ. ತೆಮಡಿಕ ಗ್ರಂಥಿಯ ಗುರಾಣಿಕ ಚೋದಕ (ತೈರಾಯ್ಡ್‌ ಸ್ಟಿಮ್ಯುಲೇಟಿಂಗ್) ರಸ ಗುರಾಣಿಕ ಗ್ರಂಥಿಯ ಸುರಿತವನ್ನು ಚೋದಿಸುವುದು. ಆದರೆ ಗುರಾಣಿಕ ಗ್ರಂಥಿಯ ರಸವಾದ ತೈರಾಕ್ಸಿನ್ ರಕ್ತದಲ್ಲಿ ಸುತ್ತಾಡುತ್ತಿರುವ ತನಕ ಗುರಾಣಿಕ ಚೋದಕ ರಸಸುರಿತವನ್ನೇ ತಗ್ಗಿಸಿಡುತ್ತದೆ. ಇದೇ ಹಿಂದುಂಬುವ ಯಾಂತ್ರಿಕತೆ. ಕೆಲವೇಳೆ ರಕ್ತದಲ್ಲಿನ ಹಲವು ರಾಸಾಯನಿಕಗಳೂ ಚೋದನಿಕದ ಸುರಿತವನ್ನು ನಿಯಂತ್ರಿಸುವುದುಂಟು. ರಕ್ತದ ಸಕ್ಕರೆಯ ಪ್ರಮಾಣ ಹೆಚ್ಚಿದ ಹಾಗೆಲ್ಲ ಇನ್ಸುಲಿನ್ನಿನ ಸುರಿತವೂ ಏರುತ್ತ ಹೋಗುವುದು ಇದರ ಒಂದು ಉದಾಹರಣೆ.

ಚೋದನಿಕಗಳ ಸುರಿಕೆಯ ಹತೋಟಿ ವಿಧಾನಗಳಲ್ಲಿ ಎರಡನೆಯದಾಗಿ, ನರಧಮನಿಗಳ ಮೂಲಕ ಹತೋಟಿಗೊಳಿಸುವುದಿದೆ. ತೆಮಡಿಕ ಗ್ರಂಥಿಯ ಹಿಂದಣ ಹಾಲೆಯನ್ನು ನರಗಳ ಮೂಲಕವೂ ಮುಂದಣ ಹಾಲೆಯನ್ನು ಅದರ ತೂರುಗೊಂದಿ ಮಂಡಲದ (ಪೋರ್ಟಲ್ ಸಿಸ್ಟಂ) ಧಮನಿಗಳ ಮೂಲಕವೂ ಚಟುವಟಿಕೆಯನ್ನು ಕೆಳತಲೆಯರೆ (ಹೈಪೊತ್ಯಾಲಮಸ್) ಅಂಕೆಗೊಳಿಸುವುದು. ಕೆಳತಲೆಯರೆಯಲ್ಲಿನ ನಡು ಬೀಜಗಳ (ನ್ಯೂಕ್ಲಿಯೈ) ತಂಡಗಳಿಂದ ಹೊರಟ ನರಗಳು ಈ ಧಮನಿಗಳ ಸುತ್ತ ಕೊನೆಗೊಳ್ಳುವುವು. ಇವುಗಳ ಕೊನೆಗಳಲ್ಲಿ ಕೆಲವು ರಸಾಂಶಗಳು ಸುರಿಯುತ್ತವೆ. ಇವಕ್ಕೆ ವಿಮೋಚಕ (ರಿಲೀಸಿಂಗ್) ಅಂಶಗಳು ಎಂದಿದೆ. ಈ ರಸಾಂಶಗಳು ರಕ್ತದ ಮೂಲಕ ತೆಮಡಿಕ ಗ್ರಂಥಿಯನ್ನು ಸೇರಿ ಅದರ ಚಟುವಟಿಕೆಯನ್ನು ಹೆಚ್ಚು ಕಡಿಮೆ ಮಾಡುತ್ತವೆ. ತೆಮಡಿಕ ಗ್ರಂಥಿಯ ಮುಂದಣ ಹಾಲೆಯಲ್ಲಿನ ಚೋದನಿಕಗಳು ಮೈಯಲ್ಲಿನ ಬಹುಪಾಲು ಎಲ್ಲ ಒಳಸುರಿಕ ಗ್ರಂಥಿಗಳ ಚಟುವಟಿಕೆಗಳನ್ನೂ ನಿಯಂತ್ರಿಸುವುದರಿಂದ ಇವೆಲ್ಲಕ್ಕೂ ಕೆಳತಲೆಯರೆಯದೇ ಮೇಲುಗೈ ಎನ್ನಬಹುದು.
ಅಡ್ರಿನಲ್ ಗ್ರಂಥಿಯ ಕುಸುರಿಯ (ಮೆಡುಲ) ಚಟುವಟಿಕೆ ಮುಖ್ಯವಾಗಿ ತನ್ನಂಕೆಯ ನರಮಂಡಲದ ಅಂಕೆಯಲ್ಲಿರುತ್ತದೆ.

ಒಳಸುರಿಕ ಗ್ರಂಥಿಗಳ ನಿಜಗೆಲಸಗಳಲ್ಲಿ ಏರುಪೇರಾದರೆ ಆಗಾಗ್ಗೆ ರೋಗಗಳು ತಲೆದೋರುತ್ತವೆ. ಹೀಗಾಗುವ ಕಾರಣಗಳೂ ಹಲಬಗೆಯವು, ಅಲ್ಲದೆ ವಿಚಿತ್ರವಾದುವು. ಮಿತಿಗೆಟ್ಟು ಬೆಳೆದರೆ, ಗಂತಿಗಳು ಒಳಗಿದ್ದರೆ, ಈ ಗ್ರಂಥಿಗಳ ಚಟುವಟಿಕೆ ಹೆಚ್ಚಿ ಚೋದನಿಕಗಳ ರಸ ಸುರಿವುದೂ ಏರುವುದು. ಹಾಳಿಡುವ ಗಂತಿಗಳಿಂದಲೂ ಗ್ರಂಥಿಗಳ ರಕ್ತನಾಳಗಳಿಗೆ ತಾಕುವ ರೋಗಗಳಿಂದಲೂ ಗೊತ್ತಿರದ ಕಾರಣಗಳಿಂದಾಗುವ ನಮೆತದಿಂದಲೂ (ಆಟ್ರೊಫಿ) ಗ್ರಂಥಿಗಳು ಜಡವಾಗಿ ಕೆಲಸಗೆಡಬಹುದು. ಆಗ ಒಳಸುರಿಕ ರಸಗಳ ಕೊರತೆಯಾಗುವುದು, ಇಲ್ಲವೇ ಸುರಿತ ನಿಂತೇ ಹೋಗಬಹುದು.

ಒಳಸುರಿಕ ಗ್ರಂಥಿಗಳ ನಿಜಗೆಲಸಗಳನ್ನು ಕಂಡುಕೊಳ್ಳಲು ಕೆಲವು ಉಪಾಯಗಳಿವೆ; ಮೊದಲಾಗಿ, ಪ್ರಯೋಗದ ಪ್ರಾಣಿಗಳಲ್ಲಿ, ಗೊತ್ತಾದ ಗ್ರಂಥಿಯನ್ನು ಮೈಯಿಂದ ಕಿತ್ತೊಗೆದಾಗ ಆಗುವ ಬದಲಾವಣೆಗಳನ್ನು ಗುರುತಿಸುವುದು. ಆರೋಗ್ಯದ ಪ್ರಾಣಿಗೆ ಒಂದು ಗ್ರಂಥಿಯ ಸಾರಕವನ್ನು ಕೊಟ್ಟಾಗ ಏನೇನಾಗುವುದೆಂದು ತಿಳಿಯುವುದು. ಕೊನೆಯದಾಗಿ, ಗ್ರಂಥಿಗೆ ಹತ್ತುವ ರೋಗಗಳಲ್ಲಿನ ಅನಾರೋಗ್ಯದ ಶೋಧನೆ. ಇದಕ್ಕಾಗಿ ಹಲವಾರು ಶಾಸ್ತ್ರಪರಿಣತರ ನೆರವು ಬೇಕಾಗುವುದು.

ತೆಮಡಿಕ: ಈ ಗ್ರಂಥಿಯ ಮುಂದಣ ಹಾಲೆಯಲ್ಲಿ, ಆರು ಚೋದನಿಕಗಳು ತಯಾರಾಗುತ್ತವೆ : ಬೆಳೆತದ ಚೋದನಿಕ (ಗ್ರೋತ್ ಹಾರ್ಮೋನ್), ಗುರಾಣಿಕ ಚೋದಕ (ತೈರೊಟ್ರೋಪಿಕ್), ಅಡ್ರಿನಲ್ ರಗಟೆ ಚೋದಕ (ಅಡ್ರಿನೊಕಾರ್ಟಿಕೊಟ್ರೋಪಿಕ್), ಹಾಲೂರಿಗ (ಪ್ರೋಲ್ಯಾಕ್ಟಿನ್), ಜನನಗ್ರಂಥಿ ಚೋದಕ (ಗೊನಾಡೊಟ್ರೋಪಿಕ್), ಮೆಲಿನೊಸೈಟ್ ಚೋದಕ ಚೋದನಿಕಗಳು. ಇವೆಲ್ಲ ಬಹುಮಟ್ಟಿಗೆ ಬೇರೆ ಒಳಸುರಿಕ ಗ್ರಂಥಿಗಳನ್ನು ಹತೋಟಿಯಲ್ಲಿಡುತ್ತವೆ.

ಬೆಳೆತದ ಚೋದನಿಕ : ಮೈ ಬೆಳೆವಣಿಗೆಗೆ ಕಾರಣವಾದ ಈ ಚೋದನಿಕ ಇಯೋಸಿನೊಫಿಲ್ ಜೀವಕಣಗಳಲ್ಲಿ ತಯಾರಾಗಿ ಒಳಸುರಿವುದು. ಬಹುಮಟ್ಟಿಗೆ ಮೈಯಲ್ಲಿನ ಎಲ್ಲ ಊತಕಗಳ ಬೆಳೆವಣಿಗೆಗೂ ಇದೇ ಕಾರಣ. ಇದರ ಸುರಿತ ಕುಂದಿದರೆ ಬೆಳೆವಣಿಗೆಯೂ ಕುಗ್ಗುತ್ತದೆ. ಸುರಿತ ಏರಿದರೆ ಬೆಳೆವಣಿಗೆ ಕೂಡ ಜೋರಾಗುವುದು ಇಲ್ಲವೇ ಹದಗೆಡುವುದು. ಅಲ್ಲದೆ, ಹಿಟ್ಟು ಸಕ್ಕರೆ ಪ್ರೋಟೀನು ಕೊಬ್ಬುಗಳ ಜೀವವಸ್ತುಕರಣದ (ಮೆಟಬಾಲಿಸಂ) ಮೇಲೂ ಇದರ ಪ್ರಭಾವವಿದೆ.

ಅನೇಕ ಪ್ರಾಣಿಗಳಲ್ಲಿ ಈ ಚೋದನಿಕ ಚೊಕ್ಕ ರೂಪದಲ್ಲಿ ದೊರೆತಿದೆ. ಇದರ ರಾಸಾಯನಿಕ ರಚನೆಯೂ ಗೊತ್ತಿದೆ. ಮಾನವನ ಈ ಚೋದನಿಕದಲ್ಲಿ 188 ಅಮೈನೋ ಆಮ್ಲಗಳಿವೆ. ಇದನ್ನು ಚುಚ್ಚಿ ಹೊಗಿಸಿದರೆ, ಪ್ರಾಣಿಗಳು ಬೇಗನೆ ಬೆಳೆಯುತ್ತವೆ. ಮಾನವನ ಇಲ್ಲವೇ ಕೋತಿಗಳ ಚೋದನಿಕ ಮಾತ್ರ ಮಾನವನಲ್ಲಿ ಪ್ರಭಾವ ತೋರುವುದೇ ಹೊರತು ಬೇರೆ ಪ್ರಾಣಿಗಳವಲ್ಲ. ಬೇರೆ ಪ್ರಾಣಿಗಳಲ್ಲೂ ಇದು ಪ್ರಭಾವಿ.
ಇಯೋಸಿನೊಫಿಲ್ ಜೀವಕಣ ಭಾಗದಲ್ಲಿ ಗಂತಿ ಎದ್ದಿದ್ದರೆ, ಎಳೆಯದಲ್ಲಿ ತೋರ ಕಾಯವೂ (ಜೈಗ್ಯಾಂಟಿಸಂ), ಬೆಳೆದವರಲ್ಲಿ ತೋರ ಅವಯವತನವೂ (ಅಕ್ರೋಮೆಗಲಿ) ಕಂಡುಬರುವುದು. ತೋರ ಅವಯವತನದಲ್ಲಿ ಅಂಗೈ ಅಂಗಾಲು ಬೆರಳುಗಳೇ ಮುಂತಾದ ಅಂಗಗಳು ಮಿತಿಮೀರಿ ಬೆಳೆದು ವಿಕಾರರೂಪ ತಾಳುವುವು. ಯಾವ ಕಾರಣದಿಂದಲಾದರೂ ಈ ಜೀವಕಣ ಭಾಗದ ನಿಜಗೆಲಸ ಕೆಟ್ಟರೆ ರೋಗಿ ಗುಜ್ಜಾರಿಯಾಗುವನು. ರಕ್ತದಲ್ಲಿ ಎಂದಿಗೂ ಇರುವ ಸಕ್ಕರೆ ಪ್ರಮಾಣವನ್ನು ಈ ಚೋದನಿಕ ಏರಿಸುತ್ತದೆ. ರಕ್ತದಲ್ಲಿಂದ ಅಮೈನೋ ಆಮ್ಲಗಳು ಜೀವಕಣಗಳ ಒಳಸಾಗುವುದನ್ನು ಸರಳಗೊಳಿಸಿ ಅಲ್ಲಿ ಪ್ರೋಟೀನು ತಯಾರಿಕೆಯನ್ನು ಹೆಚ್ಚಿಸುವುದು. ಪುಷ್ಟಿ ನೀಡಿ ಬೆಳೆಸುವ ಈ ನಿಜಗೆಲಸಕ್ಕೆ ಜೀವವಸ್ತುಚಯ (ಅನಬಾಲಿಸಂ) ಎಂದಿದೆ. ಮೈಯಲ್ಲಿ ಕೂಡಿಟ್ಟಿರುವ ಕೊಬ್ಬನ್ನು ಕೊಬ್ಬಿನ ಆಮ್ಲಗಳಾಗಿ ಇದು ಒಡೆಸುತ್ತದೆ.
ಕೆಳತಲೆಯರೆಯಲ್ಲಿ ಹುಟ್ಟುವ ಬೆಳೆತದ ಚೋದನಿಕದ ವಿಮೋಚಕ ಅಂಶ ಈ ಚೋದನಿಕ ಸುರಿವುದನ್ನು ಅಂಕೆಗೊಳಿಸುವುದು.
ಗುರಾಣಿಕ ಚೋದಕ ಚೋದನಿಕ : ಬೇಸೊಫಿಲ್ ಜೀವಕಣಗಳಲ್ಲಿ ಹುಟ್ಟಿ ಗುರಾಣಿಕ ಗ್ರಂಥಿಯ ರಚನೆ ಬೆಳೆತ ಸುರಿತಗಳನ್ನು ಚೋದಿಸುತ್ತದೆ. ಈ ಚೋದನಿಕದ ಚಟುವಟಿಕೆ ಹೆಚ್ಚಿದರೆ ಗ್ರೇವ್ಸನ ರೋಗವೇಳುವುದು. ಬಿರುಗಣ್ಣು (ಎಕ್ಸಾಫ್ತಾಲ್ಮಸ್) ಇದರ ಒಂದು ಲಕ್ಷಣವಾಗಿದ್ದರೂ ಹಾಗಾಗಲು ಕಾರಣವಾಗಿ ಬಿರುಗಣ್ಣಾಗಿಸುವ ಅಂಶವೇ ಬೇರೊಂದು ಇರುವಂತೆ ತೋರುವುದು, ಮುಖ್ಯವಾಗಿ, ಗ್ರೇವ್ಸನ ರೋಗಕ್ಕೆ ತೆಮಡಿಕ ಗ್ರಂಥಿ ಸರಿಯಾಗಿ ಕೆಲಸ ಮಾಡದ್ದೇ ಕಾರಣ, ತೆಮಡಿಕ ಗ್ರಂಥಿಯಿಂದ ಗುರಾಣಿಕ ಚೋದಕ ರಸ ಸುರಿತದ ಹತೋಟಿ ಕೆಳತಲೆಯರಲ್ಲಿನ ಗುರಾಣಿಕ ಚೋದಕ ವಿಮೋಚ ಕಾಂಶದಿಂದ ಆಗುವುದು.

ಅಡ್ರಿನಲ್ ರಗಟೆ ಚೋದಕ ಚೋದನಿಕ (ಎಸಿಟಿಎಚ್): ಬೇಸೊಫಿಲ್ ಜೀವಕಣ ಗಳಲ್ಲಿ ಇದು ತಯಾರಾಗುತ್ತದೆಂಬ ನಂಬಿಕೆಯಿತ್ತು. ಆದರೀಗ, ಕ್ರೋಮೋಫೋಬುಗಳೇ ತಯಾರಿಸುವಂತೆ ತೋರುವುದು. ಈ ಚೋದನಿಕವೂ ಚೊಕ್ಕರೂಪದಲ್ಲಿ ದೊರೆತು ರೋಗಚಿಕಿತ್ಸೆಯಲ್ಲಿ ಮದ್ದಾಗಿ ಬಳಕೆಯಲ್ಲಿದೆ. ಇದು ಅಡ್ರಿನಲ್ ಗ್ರಂಥಿಗಳ ರಗಟೆಯ (ಕಾರ್ಟೆಕ್ಸ್‌) ಬೆಳೆತ ನಿಜಗೆಲಸಗಳನ್ನು ಹೆಚ್ಚಿಸುತ್ತದೆ. ಆಲ್ಡೊಸ್ಟಿರೋನ್ ಸುರಿತವನ್ನು ಹೆಚ್ಚು ಕಡಿಮೆ ಮಾಡದು. ಈ ಚೋದನಿಕದ ಸುರಿತ ಮಿತಿಮೀರಿದರೆ, ಕಷಿಂಗನ ಲಕ್ಷಣಕೂಟ (ಕಷಿಂಗ್ಸ್‌ ಸಿಂಡ್ರೋಂ) ಕಾಣಿಸಿಕೊಳ್ಳುತ್ತದೆ. ಈ ಚೋದನಿಕ ರಸದ ಸುರಿತವನ್ನು ಕೂಡ, ಕೆಳತಲೆಯರೆಯಲ್ಲಿ ಹುಟ್ಟುವ ಅಡ್ರಿನಲ್ ರಗಟೆಚೋದಕ ವಿಮೋಚಕಾಂಶ ನಿಯಂತ್ರಿಸುವುದು.
ಹಾಲೂರಿಗ ಚೋದನಿಕ : ಇಯೋಸಿನೊಫಿಲ್ ಜೀವಕಣಗಳಲ್ಲಿ ಇದು ಹುಟ್ಟುವುದು. ಬೆಳೆದಿರುವ ಮೊಲೆಯಲ್ಲಿ ಇದು ಹಾಲೂರಿಸುತ್ತದೆ. ಹಾಲೂರಲು ಇದು ಬೇಕೇಬೇಕು. ಕೆಲವು ಪ್ರಾಣಿಗಳ ಅಂಡಾಶಯಗಳಲ್ಲಿ ಹಳದಿಂಡು (ಕಾರ್ಪಸ್ಲೂಟಿಯಂ) ರೂಪುಗೊಳ್ಳಲೂ ಇದೇ ಕಾರಣವೆನಿಸಿದೆ. ಇದರಿಂದಲೇ ಇದಕ್ಕೆ ಹಳದಿಂಡುಚೋದಕ (ಲೂಟಿಯೊ ಟ್ರೋಪಿಕ್) ಚೋದನಿಕವೆಂದು ಹೆಸರಿದೆ. ಇದು ಹೆಣ್ಣಲ್ಲೇ ಅಲ್ಲದೆ, ಗಂಡಲ್ಲೂ ಇರುವುದಾದರೂ ಗಂಡಿನಲ್ಲಿ ಇದರ ಪಾತ್ರ ಏನೆಂದು ಗೊತ್ತಿಲ್ಲ. ಕೆಳತಲೆಯರೆಯಲ್ಲಿ ಇದನ್ನು ಕುಂದಿಸುವ ಅಂಶವೊಂದು ತಯಾರಾಗುವುದು.

ಜನನಗ್ರಂಥಿ ಚೋದನಿಕಗಳು : ಕೋಶಿಕ ಚೋದಕ (ಫಾಲಿಕಲ್ ಸ್ಟಿಮುಲೇಟಿಂಗ್), ಹಳದಿಂಡುಗೊಳಿಕ (ಲೂಟಿನೈಸಿಂಗ್) ಎಂದು ಎರಡು ಚೋದನಿಕಗಳಿವೆ. ಇವೆರಡೂ ಬೇಸೊಫಿಲ್ ಜೀವಕಣಗಳಲ್ಲಿ ಹುಟ್ಟುವುವು. ಇವು ಒಂದಕ್ಕೊಂದು ನೆರವಾಗುತ್ತವೆ. 
ಹೆಂಗಸರ ಅಂಡಾಶಯಗಳಲ್ಲಿ ಕೋಶಿಕ ಚೋದಕ ಚೋದನಿಕ ಗ್ರಾಫನ ಕೋಶಿಕಗಳನ್ನು (ಗ್ರಾಫಿಯನ್ ಫಾಲಿಕಲ್ಸ್‌) ಬೆಳೆಸುವುದು. ಹೆಣ್ಣುಲಿಂಗರಸವಾದ ಬೆದೆಜನಕವನ್ನು (ಈಸ್ಟ್ರೊಜನ್) ಈ ಕೋಶಿಕ ತಯಾರಿಸಿಬಿಡುತ್ತದೆ. ಅಲ್ಲದೆ, ಕೋಶಿಕ ಚೋದಕ ಚೋದನಿಕ ಸುರಿತದ ನಿಯಂತ್ರಣವೂ ಕೆಳತಲೆಯರೆಯ ಕೈಯಲ್ಲೇ ಇದೆ. ರಕ್ತದಲ್ಲಿ ಬೆದೆಜನಕದ ಪ್ರಮಾಣ ಹೆಚ್ಚಾದರೆ, ಕೋಶಿಕ ಚೋದಕ ಚೋದನಿಕದ ಸುರಿತವೂ ಇಳಿದು, ಹಳದಿಂಡುಚೋದಕ ಚೋದನಿಕದ ಸುರಿವು ಏರುವುದು. ಪುರ್ತಿಯಾಗಿ ಬೆಳೆದ ಗ್ರಾಫನ ಕೋಶಿಕ ಒಡೆದು ಒಳಗಿರುವ ಅಂಡಾಣುವನ್ನು ಅಂಡಾಶಯದಿಂದ ಬಿಡುಗಡೆ ಮಾಡಿ ಕೋಶಿಕವಿದ್ದೆಡೆ ಹಳದಿಂಡು ಬೆಳೆವಂತೆ ಹಳದಿಂಡುಚೋದಕ ಚೋದನಿಕ ಚೋದಿಸುತ್ತದೆ. ಹೆಣ್ಣಿನ ಮತ್ತೊಂದು ಚೋದನಿಕವಾದ ಪ್ರೊಜೆಸ್ಟ್ರಿರೋನು ಹಳದಿಂಡು ಸುರಿಬಿಡುತ್ತದೆ. ಈ ಸುರಿತ ಕೂಡ ಹಳದಿಂಡುಚೋದಕ ಚೋದನಿಕದ ಹತೋಟಿಯಲ್ಲಿದೆ. ಮತ್ತೆ ಈ ಚೋದನಿಕದ ಸುರಿತ ಕೆಳತಲೆಯರೆಯ ಅಂಕೆಯಲ್ಲಿದೆ. ಅಂಡಾಶಯದಿಂದ ಹೊರಬಿದ್ದು ಗರ್ಭನಾಳದ ಮೂಲಕ ಗರ್ಭಕೋಶವನ್ನು ಹೋಗುವ ಅಂಡಾಣು ಫಲವಂತವಾಗದಿದ್ದಲ್ಲಿ ಹಳದಿಂಡು ಮುರುಟಿಕೊಳ್ಳುತ್ತದೆ. ಆಗಲೇ ಹೆಂಗಸು ಮುಟ್ಟಾಗುವುದು (ನೋಡಿ- ಮುಟ್ಟು).

ಗಂಡಿನಲ್ಲಿ ಕೋಶಿಕ ಚೋದಕ ಚೋದನಿಕ ಮುಖ್ಯ ಪಾತ್ರ ತರಡುಗಳಲ್ಲಿ ರೇತು ಕಣಗಳನ್ನು (ಸ್ಪರ್ಮೆಟೊಜೋ಼ವ) ಬೆಳೆಸುವುದರಲ್ಲಿದೆ, ಆದರೆ ಹಳದಿಂಡು ಚೋದಕ ಚೋದನಿಕ ಮಾತ್ರ ತರಡುಗಳಲ್ಲಿರುವ ಊತಕಾಂತರದ(ಇಂಟರ್ಸ್ಟಿಷಿಯಲ್) ಜೀವಕಣಗಳ ಬೆಳೆವಣಿಗೆ ಹೆಚ್ಚಿಸಿ ಅವು ಪುಲ್ಲಿಂಗಕಾರಿ (ಟೆಸ್ಟೊಸ್ಪಿರೋನ್) ಎಂಬ ಚೋದನಿಕ ಸುರಿವಂತೆ ಮಾಡುವುದು, ಆದ್ದರಿಂದಲೇ ಇದನ್ನು ಊತಕಾಂತರ ಜೀವಕಣಚೋದಕ ಚೋದನಿಕ ಎನ್ನುವುದೂ ಉಂಟು.

ಮೆಲಿನೊಸೈಟ್ ಚೋದಕ ಚೋದನಿಕ : ತೆಮಡಿಕ ಗ್ರಂಥಿಯ ನಡು ಹಾಲೆಯಲ್ಲಿ ಹುಟ್ಟುವುದು. ಇದರಿಂದ ಇದಕ್ಕೆ ಇಂಟರ್ಮೀಡಿನ್ ಎಂಬ ಹೆಸರೂ ಇದೆ. ಮುಖ್ಯವಾಗಿ ಇದರ ಪ್ರಭಾವ ಕಪ್ಪೆ ಮೀನುಗಳ ಚರ್ಮದಲ್ಲಿರುವ ಮೆಲನೊಫೋರುಗಳ ಮೇಲೆ ಕಾಣುವುದು. ಈ ಕರಿಯ ಜೀವಕಗಳು ಅಗಲವಾಗಿ ಹಿಗ್ಗಿದಾಗ ಚರ್ಮವೆಲ್ಲ ಕಪ್ಪೇರಿದಂತೆ ತೋರುತ್ತದೆ. ಮಾನವನಲ್ಲಿ ಇದರ ನಿಜಗೆಲಸವೇನೆಂದು ತಿಳಿದಿಲ್ಲ. ಆದರೂ ಮಾನವನಿಗೆ ಕೊಟ್ಟರೂ ಇದೇ ಪ್ರಭಾವವನ್ನು ಕಾಣಬಹುದು. ಈ ತೆರನ ಪ್ರಭಾವ ಅಡ್ರಿನಲ್ ರಗಟೆ ಚೋದಕ ಚೋದನಿಕದಿಂದಲೂ ತೋರುತ್ತದೆ.

ತೆಮಡಿಕ ಗ್ರಂಥಿಯ ಮುಂದಣ ಹಾಲೆ ಪುರ್ತಿ ಹಾಳಾದರೆ ಸಿಮ್ಮಂಡ್ಸನ ರೋಗವೇಳುವುದು. ಈ ರೋಗದಲ್ಲಿ ಅಂಡಾಶಯಗಳು ನವೆದುಹೋಗಿ ಗುರಾಣಿಕ, ಅಡ್ರಿನಲ್ ರಗಟೆ ಗ್ರಂಥಿಗಳ ನಿಜಗೆಲಸಗಳೂ ಕುಗ್ಗುತ್ತವೆ. ರೋಗಿ ಬಡಕಲಾಗಿ ನಿತ್ರಾಣಿಯಾಗುವನು. ರಕ್ತದಲ್ಲಿನ ಸಕ್ಕರೆ ಪ್ರಮಾಣ ಕುಗ್ಗಲೂಬಹುದು.

ತೆಮಡಿಕದ ಹಿಂದಣ ಹಾಲೆ ಚೋದನಿಕಗಳು : ಈ ಹಿಂದಣ ಹಾಲೆಯನ್ನು ಕೆಳತಲೆಯರೆಯಿಂದ ಇಳಿದು ಬೆಳೆದ ಭಾಗವೆಂದೂ ಗಣಿಸಬಹುದು. ಕೆಳತಲೆಯರೆಯಲ್ಲಿ ರುವ ಕಣ್ಣುಮೇಲಿನ (ಸುಪ್ರ ಆಪ್ಟಿಕ್) ಅಲ್ಲದೆ ಮಿದುಳ್ಗುಳಿ ಬದಿಯ (ಪ್ಯಾರಾವೆಂಟ್ರಿಕ್ಯುಲಾರ್) ನಡುಬೀಜಗಳಿಂದ ಹೊರಡುವ ನರಗಳು ತೆಮಡಿಕದ ಹಿಂದಣ ಹಾಲೆಯಲ್ಲಿ ಕೊನೆಗೊಳ್ಳುತ್ತವೆ. ಹಿಂದಣ ಹಾಲೆಯ ರಚನೆಯೂ ಮಿದುಳಿನದರ ಹಾಗೆಯೇ ಇರುವುದು. ನರಂಟು (ನ್ಯೂರೋಗ್ಲಿಯ) ಜೀವಕಣಗಳ ರೂಪ ಬದಲಾಗಿ ತೆಮಡಿಕ ಕಣಗಳಾಗುವುವು (ಪಿಟ್ಯೂಸೈಟ್). ಈ ಹಿಂದಣ ಹಾಲೆಯಲ್ಲಿ ಎರಡು ಚೋದನಿಕಗಳು ಸುರಿಯುತ್ತವೆ : ರಕ್ತನಾಳೊತ್ತುಕ (ವೇಸೊಪ್ರೆಸ್ಸಿನ್) ಇಲ್ಲವೇ ಮೂತ್ರಸುರಿಕ ರೋಧಕ (ಆಂಟಿ ಡೈಯೂರೆಟಿಕ್) ಚೋದನಿಕ ಒಂದು; ಇನ್ನೊಂದು ಆಕ್ಸಿಟೋಸಿನ್. ಇವೆರಡು ಕೆಳತಲೆಯರೆಯ ನರಕಣಗಳಲ್ಲಿ ತಯಾರಾಗಿ ನರಗಳ ಮೂಲಕ ಸಾಗಿಳಿದು ಬಂದು ಹಿಂದಣ ಹಾಲೆ ಸೇರಿಕೊಂಡು ತೆಮಡಿಕ ಕಣಗಳಲ್ಲಿ ಕೂಡಿದ್ದು ಬೇಕೆಂದಾಗ ಬಿಡುಗಡೆಯಾಗುವುವು.

ಹಿಂದಣ ಹಾಲೆಯ ಸಾರಕವನ್ನು ಪ್ರಾಣಿಗಳಿಗೆ ಚುಚ್ಚಿ ಹೋಗಿಸಿದರೆ ರಕ್ತನಾಳಗಳ ಸ್ನಾಯುಗಳು ಕುಗ್ಗಿ, ರಕ್ತದ ಒತ್ತಡವೇರುವುದು, ಅಷ್ಟೊಂದು ಚೋದಕ ಸುರಿಯದ್ದರಿಂದ ಸಾಮಾನ್ಯವಾಗಿ ಈ ಪ್ರಭಾವ ಆರೋಗ್ಯದಲ್ಲಿ ಕಾಣಬರದು, ಆದರೆ ಮೂತ್ರಸುರಿಕರೋಧಕ ಪ್ರಭಾವ ಮಾತ್ರ ಕೊಂಚ ಕೊಟ್ಟರೂ ತೋರುತ್ತದೆ. ಮೈಯಲ್ಲಿರುವ ಲವಣಗಳ ಸಾಂದ್ರತೆಮಟ್ಟಕ್ಕೆ ತಕ್ಕಂತೆ ಇದು ಸುರಿವುದು, ಮೈಯಲ್ಲಿನ ರಸಗಳಲ್ಲಿ ಉಪ್ಪು (ಸೋಡಿಯಂ ಕ್ಲೋರೈಡು) ಹೆಚ್ಚಿದಾಗ ರಸಗಳ ಆಸ್ಮೋಟಿಕ್ ಒತ್ತಡ ಏರುತ್ತದೆ. ಆಗ ಕೆಳತಲೆಯರೆಯಲ್ಲಿರುವ ಆಸ್ಮೊರಿಸೆಪ್ಪಾರ್ಸ್ ಚೋದನೆಯಾಗಿ ಈ ಚೋದನಿಕವನ್ನು ಹಿಂದಣ ಹಾಲೆಯಲ್ಲಿ ಸುರಿವಂತೆ ಮಾಡುವುದು. ಮುಖ್ಯವಾಗಿ ಇದು ಮೂತ್ರಪಿಂಡದ ಕಿರ್ನಾಳಗಳು (ಟ್ಯೂಬ್ಯೂಲ್ಸ್‌) ನೀರನ್ನು ರಕ್ತಕ್ಕೆ ಮತ್ತೆ ಹೇರಿಕೊಳ್ಳುವಂತೆ ಮಾಡಿ ಮೂತ್ರ ಸುರಿವುದನ್ನು ತಗ್ಗಿಸುತ್ತದೆ. ಆಗ ನೀರು ಮೈಯಲ್ಲೇ ಉಳಿವುದು.
ಹಿಂದಣ ಹಾಲೆಯನ್ನು ಹಾಳುಮಾಡಿದರೆ, ಕಿತ್ತೊಗೆದರೆ, ರೋಗ ಹತ್ತಿದರೆ, ಸಪ್ಪನೆ ಬಹುಮೂತ್ರ (ಡಯಬೆಟಿಸ್ ಇನ್ಸಿಪಿಡಸ್) ಕಾಣಿಸಿಕೊಳ್ಳುತ್ತದೆ. ಈ ರೋಗದಲ್ಲಿ ಮೂತ್ರ ಬರೀ ನೀರುನೀರಾಗಿ ಹೆಚ್ಚೆಚ್ಚಾಗಿ ಹೋಗುತ್ತಿರುವುದು. ಮೂತ್ರದ ವಿಶಿಷ್ಟ ಗುರುತ್ವ ಇಳಿದಿರುವುದು. ಸಿಹಿಮೂತ್ರದಲ್ಲಿ (ಡಯಬೆಟಿಸ್ ಮೆಲ್ಲಿಟಸ್) ಇದ್ದಂತೆ ಮೂತ್ರದಲ್ಲಿ ಸಕ್ಕರೆ ಹೋಗದು, ಹಿಂದಣ ಹಾಲೆಯ ಮೂತ್ರ ಸುರಿಕರೋಧಕ ಚೋದನಿಕವನ್ನು ಚುಚ್ಚಿ ಹೊಗಿಸಿದರೆ ಇಲ್ಲವೇ ನಶ್ಯದ ಹಾಗೆ ಕೊಡುವುದರಿಂದ ರೋಗವನ್ನು ಅಂಕೆಯಲ್ಲಿಡಬಹುದು.

ಆಕ್ಸಿಟೋಸಿನ್ ಮುಖ್ಯವಾಗಿ ಹೆರಿಗೆಯಲ್ಲಿ ಗರ್ಭಕೋಶದ ಸ್ನಾಯುಗಳನ್ನು ಬಲುಚುರುಕಾಗಿ ಕುಗ್ಗಿಸುತ್ತದೆ. ಹೆರಿಗೆಯಲ್ಲಿ ಇದು ಒಳ್ಳೆಯ ನೆರವು ಎನಿಸಿದರೂ ಇದು ಆಗಬೇಕೇ ಬೇಡವೇ ಎನ್ನುವುದು ಗೊತ್ತಿಲ್ಲ. ತುಂಬಿರುವ ಮೊಲೆಗಳಿಂದ ಹಾಲನ್ನು ಹೊರಡಿಸುವುದು ಈ ಚೋದನಿಕದ ಇನ್ನೊಂದು ನಿಜಗೆಲಸ. ಆದರೆ ಹಾಲನ್ನು ತಯಾರಿಸುವ ಹಾಗೆ ಚೋದಿಸದು. ಇದೊಂದು ಹಿಮ್ಮುರಿವ ವರ್ತನೆ (ರಿಫ್ಲೆಕ್ಸ್‌ ಆಕ್ಷನ್), ಮೊಲೆ ಚೂಚುಕವನ್ನು ಕೂಸು ಚೀಪಿದಾಗ ಈ ಆಕ್ಸಿಟೋಸಿನ್ ಸುರಿದು ಮೊಲೆಯ ಸಾಗುನಾಳಗಳ ಸುತ್ತಲೂ ಇರುವ ಸ್ನಾಯು ಮೇಲ್ಪೊರೆಯ (ಮಯೋ ಎಪಿತೀಲಿಯಲ್) ಜೀವಕಣಗಳನ್ನು ಕುಗ್ಗಿಸುವುದರಿಂದ ಹಾಲು ಹೊರಬರುವಂತೆ ಹಿಂಡುವುದು.

ಗಂಡಿನ ಬೀಜವಾದ ರೇತುಕಣ (ಸ್ವರ್ಮೆಟಜ಼Æನ್) ಗರ್ಭಕೋಶದೊಳಗೆ ಮುಂದೆ ಸಾಗಲೂ ಇದು ನೆರವಾಗುವುದೆಂಬ ನಂಬಿಕೆಯಿದೆ.
ಗುರಾಣಿಕ: ಈ ಗ್ರಂಥಿ ತೈರಾಕ್ಸಿನ್, ಟ್ರೈಅಯೊಡೊತೈರೊನೀನ್ ಚೋದನಿಕಗಳನ್ನು ಸುರಿಸುವುದು. ಇವಲ್ಲಿ ಅಯೊಡೀನ್ ಧಾತು ಇರುತ್ತದೆ. ಸುತ್ತಲೂ ಇರುವ ಗೋಳಾಕಾರದ ಕೋಶಿಕಗಳ ಒಂಟಿ ಪದರದ ಒಳಗಡೆ ಗ್ಲ್ಯಾಬ್ಯುಲಿನ್ ಪ್ರೋಟೀನಿನೊಂದಿಗೆ ಚೋದನಿಕ ಕೂಡಿ ತೈರೊಗ್ಲಾಬ್ಯುಲಿನ್ ಆಗಿ ಕೂಡಿರುವುದು. ಗುರಾಣಿಕ ಚೋದನಿಕ ಸುರಿವಾಗ ಗ್ಲಾಬ್ಯುಲಿನಿನಿಂದ ಬೇರ್ಪಟ್ಟು ರಕ್ತ ಸೇರುತ್ತದೆ.
ಈ ಗ್ರಂಥಿಯ ಚೋದನಿಕಗಳು ಮೈಯಲ್ಲಿನ ಎಲ್ಲ ಊತಕಗಳ ಜೀವವಸ್ತುಕರಣ ವೇಗವನ್ನು ಹೆಚ್ಚಿಸಿ ಚಟುವಟಿಕೆ ಏರುವಂತೆ ಮಾಡುವುವು. ಹಾಗಾದಾಗ ಆಮ್ಲಜನಕದ ಸೇವನೆ ಹೆಚ್ಚಿ ಬೇಡಿಕೆ ಬಹಳವಾಗಿ ಮೈಯಲ್ಲಿ ಕಾವೇರುತ್ತದೆ. ಮೈ ಮನಸ್ಸುಗಳ ಬೆಳೆವಣಿಗೆಗೂ ಈ ಚೋದನಿಕಗಳು ಬೇಕೇ ಬೇಕು. ಇವು ಸುರಿವುದರ ಹತೋಟಿ ತೆಮಡಿಕದ ಮುಂದಣ ಹಾಲೆಯ ಗುರಾಣಿಕ ಚೋದಕ ಚೋದನಿಕದ ಕೈಲಿದೆ.
ಗುರಾಣಿಕದ ಚಟುವಟಿಕೆ ಕುಂದಿದರೆ ಲೋಳುಬ್ಬರದ (ಮಿಕ್ಸಿಡೀಮ) ರೋಗವೇಳುವುದು. ಜೀವವಸ್ತ್ತುಕರಣವೇಗ ಕುಂದಿರುವುದರಿಂದ ರೋಗಿ ನಿತ್ರಾಣಿಯಾಗಿ ಮಂಕನಾಗಿ ಜಡವಾಗಿ ಬಿದ್ದಿರುವನು. ಚರ್ಮ ಒಣಕಲಾಗಿ ಕೂದಲುದುರುವುದು. ರೋಗಿ ಚಳಿಯನ್ನು ತಡೆಯಲಾರ. ಗುರಾಣಿಕ ಗ್ರಂಥಿ ಎಳೆತನದಲ್ಲಿ ಸರಿಯಾಗಿ ಬೆಳೆಯದಿದ್ದಲ್ಲಿ ಮಗು ಬೆಳೆಯದೆ ಗುಜ್ಜಾರಿಯಾಗಿ ಮಂಕಾಗುವುದು. ಇದಕ್ಕೆ ಹೆಡ್ಡ ಗುಜ್ಜು (ಕ್ರೆಟಿನಿಸಂ) ಎಂದು ಹೆಸರು, ಜನನಾಂಗಗಳು ಬೆಳೆಯದೆ, ವಯಸ್ಸಾದರೂ ಎಳೆಯದಾಗೇ ಇರವುವು. ಈ ರೋಗ ತಲೆದೋರಿದ 2-3 ತಿಂಗಳೊಳಗಾಗೇ ಕಂಡು ಗುರುತಿಸಿ ತೈರಾಕ್ಸಿನನ್ನು ಕೊಡುತ್ತಬಂದರೆ ಮಗುವಿನ ಬೆಳೆವಣಿಗೆ ಉತ್ತಮವಾಗುತ್ತದೆ.

ಗುರಾಣಿಕದ ಚಟುವಟಿಕೆ ಮಿತಿಮೀರಿದರೆ, ಜೀವವಸ್ತುಕರಣ ಏರುತ್ತದೆ. ಹಸಿವು ವಿಪರೀತವಾಗಿ, ಬಹಳ ತಿನ್ನುವಂತಾಗುತ್ತದೆ. ಇಷ್ಟಾದರೂ ಮೈತೂಕವಿಳಿದು ಎದೆ ಗುಂಡಿಗೆ ಜೋರಾಗಿ ಬಡಿದುಕೊಳ್ಳುವುದು. ಮೈಕಾವೇರುವುದರಿಂದ ಯಾವಾಗಲೂ ಬೆವರುತ್ತಿರುವುದು. ರೋಗಿ ಬೇಸಗೆಯ ಬೇಗೆಯನ್ನು ತಡೆಯದಾಗುವನು. ಈ ಗ್ರಂಥಿ ಚುರುಕಿದ್ದಾಗಿನ ಗ್ರೇವ್ಸನ ರೋಗದಲ್ಲಿ ಬಿರುಗಣ್ಣು ಇರುವುದು.
ಚಟುವಟಿಕೆಯಿಂದ ಚೆನ್ನಾಗಿರಲು ಗುರಾಣಿಕಕ್ಕೆ ಅಯೊಡೀನಿನ ಸರಬರಾಜು ಸಾಕಷ್ಟಿರಬೇಕು. ಅಡುಗೆ ಉಪ್ಪಿನಲ್ಲಿ ಇದು ಮುಖ್ಯವಾಗಿ ಒದಗುತ್ತದೆ. ಮೈಗೆ ಅಯೊಡೀನಿನ ಕೊರತೆಯಾದರೆ, ಗುರಾಣಿಕ ಗ್ರಂಥಿ ದೊಡ್ಡದಾಗುತ್ತದೆ. ಇದಕ್ಕೆ ಸರಳ ಗಳಗಂಡ (ಸಿಂಪಲ್ ಗಾಯ್ಟರ್) ಎಂದಿದೆ. ಅಯೊಡೀನ್ ಸಾಕಷ್ಟು ದೊರೆಯದಾದಾಗ ಗುರಾಣಿಕದ ಸುರಿಕೆಯು ತಗ್ಗುವುದು. ಹೀಗೆ ರಕ್ತದಲ್ಲೂ ಇದರ ಚೋದನಿಕಗಳು ಕಡಿಮೆಯಾದಾಗ, ತೆಮಡಿಕದ ಮುಂದಣ ಹಾಲೆಯ ಗುರಾಣಿಕ ಚೋದಕ ಚೋದನಿಕದ ಸುರಿತ ಹೆಚ್ಚುವುದರಿಂದ ಗುರಾಣಿಕ ದಪ್ಪನಾಗುತ್ತದೆ. ಇದರಿಂದಲೇ ಗುರಾಣಿಕದ ಚೋದನಿಕಗಳ ಸುರಿತ ಕುಂದಿಸುವ ಮದ್ದುಗಳ ಸೇವನೆಯಿಂದಲೂ ಗಳಗಂಡವಾಗುವುದು. ಬಲು ಚುರುಕಾಗಿರುವ ಗುರಾಣಿಕದ ಚೋದನಿಕಗಳ ಸುರಿತ ಕುಂದಿಸುವ ಮದ್ದುಗಳ ಸೇವನೆಯಿಂದಲೂ ಗಳಗಂಡವಾಗುವುದು. ಬಲು ಚುರುಕಾಗಿರುವ ಗುರಾಣಿಕದ ಚಟುವಟಿಕೆಯನ್ನು ಕುಂದಿಸುವ ಕಾರ್ಬಿಮ ಜೋಲ್, ತಯೊಯೂರಸಿಲ್ ಈ ಬಗೆಯ ಮದ್ದುಗಳು.

ಗುರಾಣಿಕದಿಂದ ಸುಣ್ಣವೇರಿಕ (ಕ್ಯಾಲ್ಸಿಟೊನಿನ್) ಚೋದನಿಕವೊಂದು ಸುರಿವುದೆಂದು ಇತ್ತೀಚೆಗೆ ಗೊತ್ತಾಗಿದೆ. ಮೂಳೆಗಳಲ್ಲಿನ ಸುಣ್ಣ ಕರಗಿ ಕಳೆವುದನ್ನು ತಪ್ಪಿಸಿ, ರಕ್ತದ ಸುಣ್ಣಧಾತು ಪ್ರಮಾಣವನ್ನು ಇದು ತಗ್ಗಿಸುವುದು.

ಬದಿಗುರಾಣಿಕಗಳು: ಇವು ಪ್ಯಾರಾತಾರ್ಮೋನ್ ಚೋದನಿಕವನ್ನು ಸುರಿಸುತ್ತವೆ. ಮೈಯಲ್ಲಿನ ಸುಣ್ಣಧಾತು, ರಂಜಕಗಳು ಜೀವವಸ್ತುಕರಣವನ್ನು ಈ ಚೋದನಿಕ ನಿಯಂತ್ರಿಸುವುದು. ಇದೊಂದು ಪ್ರೋಟೀನು. ಮೂಳೆಗಳಲ್ಲಿ ಕೂಡಿರುವ ಸುಣ್ಣಧಾತುವನ್ನು ತೆಗೆದು ರಕ್ತಕ್ಕೆ ಸೇರಿಸುವುದು. ಅಂತೆಯೇ ತೆಗೆದ ರಂಜಕವನ್ನು ಮೂತ್ರದಲ್ಲಿ ಹೊರದೂಡುತ್ತದೆ. ಬದಿಗುರಾಣಿಕ ಗ್ರಂಥಿಗಳು ತೆಮಡಿಕದ ಹತೋಟಿಯಲ್ಲಿಲ್ಲ. ರಕ್ತದಲ್ಲಿನ ಸುಣ್ಣಧಾತುವಿನ ಪ್ರಮಾಣಕ್ಕೆ ತಕ್ಕಹಾಗೆ ಇದರ ಚೋದನಿಕದ ಸುರಿತವೂ ಇರುವುದು. ರಕ್ತದಲ್ಲಿ ಸುಣ್ಣಧಾತು ಹೆಚ್ಚಾಗಿದ್ದರೆ ಇದರ ಸುರಿತ ಕುಗ್ಗುವುದು, ಕಡಿಮೆಯಾದರೆ ಸುರಿತ ಹೆಚ್ಚುತ್ತದೆ.

ಈ ಗ್ರಂಥಿಗಳ ಚಟುವಟಿಕೆ ಏರುವುದು, ಇವು ದೊಡ್ಡದಾಗಿ ಬೆಳೆದಾಗ ಇಲ್ಲವೇ ಒಳಗೆ ಗಂತಿ ಎದ್ದಾಗ ರಕ್ತದಲ್ಲಿನ ಸುಣ್ಣಧಾತು ಹೆಚ್ಚಿ, ರಂಜಕ ಪ್ರಮಾಣ ಇಳಿವುದು, ಇದರಿಂದ ಮೂಳೆಗಳಲ್ಲಿ ಸುಣ್ಣಧಾತು ಇಲ್ಲದಂತಾಗಿ ನಾರುಗೂಡಿ ಟೊಳ್ಳಾಗಿ ಸುಲಭವಾಗಿ ಮುರಿಯಬಹುದು. ಇಲ್ಲವೆ ಸೊಟ್ಟನಾಗಬಹುದು. ಇದಕ್ಕೆ ರೆಕ್ಲಿಂಗ್ ಹೌಸೆನ್ನನ ರೋಗ ಎಂದಿದೆ. ಸುಣ್ಣದ ಲವಣಗಳು ಬಹಳವಾಗಿ ಮೂತ್ರಪಿಂಡಗಳ ಮೂಲಕ ಸಾಗುವುದರಿಂದ ಆ ಅಂಗದಲ್ಲೇ ಸುಣ್ಣಗೂಡಬಹುದು (ಕ್ಯಾಲ್ಸಿಫಿಕೇಷನ್), ಇದೇ ಸುಣ್ಣಕಲ್ಲುಗಳಂತಾ ಗಿರಲೂಬಹುದು.
ಬದಿಗುರಾಣಿಕಗಳ ಚಟುವಟಿಕೆ ಕುಂದಿದ್ದಾಗ, ರಕ್ತದಲ್ಲಿನ ಸುಣ್ಣಧಾತುವಿನ ಪ್ರಮಾಣವಿಳಿದು, ರಂಜಕದ ಪ್ರಮಾಣವೇರುತ್ತದೆ. ರಕ್ತದಲ್ಲಿ ಸುಣ್ಣಧಾತು ಸಾಕಷ್ಟಿರದೆ ಕೊರೆಯಾದಾಗ, ಮೈಯಲ್ಲಿ ಕೆಲವೆಡೆಗಳಲ್ಲಿ (ಮುಖ್ಯವಾಗಿ ಕೈಕಾಲುಗಳಲ್ಲಿ) ಸ್ನಾಯುಗಳು ಯಾವ ಚೋದನೆಯೂ ಇಲ್ಲದೆ ಕುಗ್ಗುತ್ತ ಸೆಡೆದುಕೊಳ್ಳುವುವು. ಇದಕ್ಕೆ ಎಡೆ ಸೆಡೆತ (ಟೆಟನಿ) ಎಂದಿದೆ. ಈ ರೋಗಿಗಳಿಗೆ ಕಣ್ಣಪೊರೆಯೂ (ಕ್ಯಾಟರಾಕ್ಟ್‌) ಬರಬಹುದು. ಸುಣ್ಣಾಂಶವಿರುವ ಆಹಾರಸೇವನೆ, ಡಿ ಜೀವಾತುಗಳಿಂದ ಇದನ್ನು ಗುಣಪಡಿಸಬಹುದು. ಪ್ಯಾರಥಾರ್ಮೋನ್ ಕೊಟ್ಟರೂ ಗುಣಕಾರಿಯೇ, ಆದರೆ ಇದರ ಪ್ರಭಾವ ಕಾಣುವುದು ಬಲು ನಿಧಾನ. ಕೊಡುತ್ತಲೇ ಇದ್ದರೆ ಕೆಲಸಕ್ಕೆ ಬಾರದಾಗುತ್ತದೆ.

ಮಾಂಸಲಿ: ಈ ಗ್ರಂಥಿಯ ಒಳಸುರಿಕ ಭಾಗಗಳಾದ ಲ್ಯಾಂಗರ್ ಹ್ಯಾನ್ಸನ ದೀವುಗಳಲ್ಲಿರುವ ಅಲ್ಪ ಜೀವಕಣಗಳಲ್ಲಿ ಗ್ಲೂಕಗಾನ್, ಬೀಟ ಜೀವಕಣಗಳಲ್ಲಿ ಇನ್ಸುಲಿನ್ ತಯಾರಾಗುತ್ತದೆ. ಹಿಟ್ಟು ಸಕ್ಕರೆಗಳ ಜೀವವಸ್ತುಕರಣದ ಮೇಲೆ ಇವುಗಳ ಪ್ರಭಾವ ಮುಖ್ಯ.
ರಕ್ತದಲ್ಲಿನ ದ್ರಾಕ್ಷಿಸಕ್ಕರೆಯ (ಗ್ಲೂಕೋಸ್) ಪ್ರಮಾಣವನ್ನು ಇನ್ಸುಲಿನ್ ತಗ್ಗಿಸುವುದು. ಅಲ್ಲದೆ, ಈಲಿಯಲ್ಲೂ ಸ್ನಾಯುಗಳಲ್ಲೂ ದ್ರಾಕ್ಷಿಸಕ್ಕರೆಯನ್ನು ಮಿಗದಿಟ್ಟಾಗಿ (ಗ್ಲೈಕೊಜನ್) ಬದಲಿಸಿ ಕೊಡುತ್ತದೆ. ಕೆಲವು ಅಮೈನೊ ಆಮ್ಲಗಳೂ ಕೊಬ್ಬುಗಳಿಂದ ಬರುವ ಗ್ಲಿಸರಾಲೂ ಈಲಿಯಲ್ಲಿ ದ್ರಾಕ್ಷಿಸಕ್ಕರೆಯಾಗಿ ಬದಲಾಗುವ ಚಟುವಟಿಕೆಗೆ ನವಸಕ್ಕರೆಜನನ (ನಿಯೊಗ್ಲುಕೊಜೆನಿಸಿಸ್) ಎಂದು ಹೆಸರು, ಈ ಚಟುವಟಿಕೆಯನ್ನು ಗ್ಲೂಕಾನ್ ಏರಿಸುತ್ತದೆ. ಇನ್ಸುಲಿನ್ ಕುಂದಿಸುತ್ತದೆ. ಆಗ ರಕ್ತದ ಸಕ್ಕರೆ ಪ್ರಮಾಣ ಇಳಿಯುತ್ತದೆ. ದ್ರಾಕ್ಷಿಸಕ್ಕರೆ ಜೀವಕಣಗಳ ಪೊರೆಗಳ ಮೂಲಕ ಒಳಸಾಗಲು ಅನುಗೊಳಿಸುವುದೇ ಇನ್ಸುಲಿನ್ನಿನ ಬಹುಮುಖ್ಯ ಪಾತ್ರ. ರಕ್ತದಲ್ಲಿ ಸಕ್ಕರೆಯ ಪ್ರಮಾಣ ಏರಿದರೆ, ಇನ್ಸುಲಿನ್ ಸುರಿಕೆ ಏರುವುದು, ಅದು ಇಳಿದರೆ ಇದೂ ಇಳಿವುದು.

ಇನ್ಸುಲಿನ್ನಿನ ಎದುರುವರ್ತನೆ ಗ್ಲೂಕಗಾನಿನದು. ರಕ್ತದಲ್ಲಿನ ದ್ರಾಕ್ಷಿಸಕ್ಕರೆ ಪ್ರಮಾಣವನ್ನು ಏರಿಸುತ್ತದೆ. ಈಲಿಯಲ್ಲಿ ಕೂಡಿಟ್ಟಿರುವ ಮಿಗದಿಟ್ಟನ್ನು ದ್ರಾಕ್ಷಿಸಕ್ಕರೆಗಿಳಿಸುತ್ತದೆ. ಇನ್ಸುಲಿನ್ ಎದುರಾಗಿ, ಗ್ಲಾಕಾನ್ ಒಂದೇ ಅಲ್ಲದೆ, ತೆಮಡಿಕದ ಮುಂದಣ ಹಾಲೆಯ ಬೆಳೆತ ಚೋದನಿಕ, ಅಡ್ರಿನಲ್ ರಗಟೆಯ ಸಕ್ಕರೆ ಕಾರ್ಟಿಕಾಯ್ಡುಗಳು, ಅಡ್ರಿನಲೀನ್ ಇವು ಕೂಡ ನವಸಕ್ಕರೆ ಜನನವನ್ನು ಹೆಚ್ಚಿಸುವುವು.
ಇನ್ಸುಲಿನ್ ಕೊರತೆಯಿಂದ ಸಿಹಿಮೂತ್ರ ರೋಗವಾಗುವುದು, ಇದರಲ್ಲಿ ರಕ್ತದಲ್ಲಿನ ದ್ರಾಕ್ಷಿಸಕ್ಕರೆ ಪ್ರಮಾಣ ಎಂದಿನ ಶೇಕಡಾ 180 ಮಿಲಿ ಗ್ರಾಂಗಿಂತಲೂ ಹೆಚ್ಚಿದ್ದು, ಮೂತ್ರದಲ್ಲೂ ಹೊರಬೀಳುತ್ತಿರುವುದು, ಆಹಾರಸೇವನೆ ಆದಮೇಲೆ ಇನ್ನೂ ಹೆಚ್ಚು. ಮೈಯಲ್ಲಿ ಬಳಕೆಯಾಗದೆ ಮೂತ್ರದಲ್ಲಿ ಕಳೆದುಹೋಗುವುದರಿಂದಲೂ ಊತಕಗಳ ಜೀವವಸ್ತುಲಯ (ಕೆಟಬಾಲಿಸಂ) ಹೆಚ್ಚಾಗುವುದರಿಂದಲೂ ರೋಗಿ ಬಡಕಲನಾಗಿ ನಿತ್ರಾಣಿಯಾಗುವನು, ಮೂತ್ರದಲ್ಲಿ ಸಕ್ಕರೆ ಹೆಚ್ಚಾಗಿ ಹೊರಕಳೆಯಲು ಅದರೊಂದಿಗೆ ಬಹಳ ನೀರೂ ಹೊರಬೀಳಬೇಕಾಗುತ್ತದೆ. ಬಾಯಾರಿಕೆ ಹೆಚ್ಚುತ್ತದೆ. ಬರುಬರುತ್ತ ರೋಗಿಯ ಧಮನಿಗಳಲ್ಲಿ ಧಮನಿಪೆಡಸಣಿ (ಆರ್ಟಿಲಿರಿಯೊ ಸ್ಕ್ಲೀರೋಸಿಸ್) ತೋರು ವುದು, ಕಣ್ಣು ಪೊರೆಯೂ ಬರಬಹುದು.

ಇನ್ಸುಲಿನನ್ನು ಮಿತಿಮೀರಿ ಕೊಟ್ಟರೆ, ರೋಗಿಯ ರಕ್ತದಲ್ಲಿನ ಸಕ್ಕರೆ ಪ್ರಮಾಣ ತೀರ ಕುಸಿದು ನಿತ್ರಾಣ, ನಡುಕ, ಕಬ್ಬೆವರಿಕೆ, ಸೆಳವೂ ಆಗಿ ಕೊನೆಗೆ ಮಯಕ (ಕೋಮ) ಕಾಣಿಸಿಕೊಂಡು, ಚಿಕಿತ್ಸೆ ದೊರೆಯದಿದ್ದರೆ ಸಾಯಬಹುದು. ಕೆಲವು ಮನೋರೋಗಿಗಳಿಗೆ ಚಿಕಿತ್ಸಾಕ್ರಮವಾಗಿ ಸೆಳವುಕಾರಕವಾಗೂ ಇನ್ಸುಲಿನನ್ನು ರಕ್ತನಾಳಾಂತರ ಚುಚ್ಚಿ ಹೊಗಿಸುವುದುಂಟು. ಮಾಂಸಲಿಯಲ್ಲಿ ಇನ್ಸುಲಿನ್ ಹುಟ್ಟಿಸುವ ದೀವುಗಳಲ್ಲಿ ಗಂತಿ ಎದ್ದರೂ ಹೀಗಾಗುವುದು, ಈ ಲಕ್ಷಣಗಳ ಸೂಚನೆ ಕಂಡಕೂಡಲೇ ಒಂದಿಷ್ಟು ಸಕ್ಕರೆ ತಿಂದರೆ ಕೂಡಲೇ ಗುಣವಾಗುತ್ತದೆ (ನೋಡಿ- ಇನ್ಸುಲಿನ್).
ಅಡ್ರಿನಲುಗಳು: ಈ ಗ್ರಂಥಿಗಳಲ್ಲಿ ಒಂದೆಡೆಯಲ್ಲೇ ಇರುವ ಕುಸುರಿಯೂ (ಮೆಡುಲ), ರಗಟೆಯೂ (ಕಾರ್ಟೆಕ್ಸ್‌) ರಚನೆ, ನಿಜಗೆಲಸ, ಬಣ್ಣವೇರಿಕೆಗಳಲ್ಲಿ ತೀರ ಬೇರೆಬೇರೆಯಾದ್ದರಿಂದ ಇವೆರಡು ಭಾಗಗಳನ್ನೂ ಬೇರೆ ಬೇರೆ ಗ್ರಂಥಿಗಳಂತೆ ಗಣಿಸಬೇಕು. ಕುಸುರಿಯನ್ನು ಪ್ರಾಣಿಗಳಲ್ಲಿ ತೆಗೆದುಹಾಕಿದರೆ ಪ್ರಾಣಾಪಾಯವಿಲ್ಲ. ಆದರೆ, ರಗಟೆಯನ್ನು ತೆಗೆದುಹಾಕಿದರೆ ಮಾತ್ರ ಕೆಲವೇ ದಿನಗಳಲ್ಲಿ ಸಾಯುವುವು (ನೋಡಿ- ಅಡ್ರಿನಲ್-ಗ್ರಂಥಿಗಳು).

ಅಡ್ರಿನಲ್ ಕುಸುರಿ: ಅನುವೇದನಾ ನರಮಂಡಲದಲ್ಲಿನ (ಸಿಂಪತೆಟಿಕ್ ನರ್ವಸ್ ಸಿಸ್ಟಂ) ನರಗಂಟುಗಳಲ್ಲಿ (ಗಾಂಗ್ಲಿಯಾನ್ಸ್‌) ಇರುವ ಹಾಗೇ ಅಡ್ರಿನಲ್ ಗ್ರಂಥಿಯ ಕುಸುರಿಯಲ್ಲೂ ಕ್ರೋನಂಟಿನ ಜೀವಕಣಗಳಿವೆ. ಅಲ್ಲದೆ, ಆ ನರದ ಮಂಡಲದ ನರಗಳು ಈ ಕುಸುರಿಗೆ ಸಂಬಂಧಿಸಿವೆ. ಈ ಮಂಡಲದ ನರಗಳ ಚೋದನೆಯಾದಾಗ ಕುಸುರಿಯಿಂದ ಚೋದನಿಕ ರಸ ಸುರಿವುದು. ಈ ರಸದಲ್ಲಿ ಅಡ್ರಿನಲಿನ್ ಇರುವುವು. ಮೊದಲಿನದು ಶೇ.70-90 ರಷ್ಟೂ ಎರಡನೆಯದು ಶೇ.10-30ರಷ್ಟೂ ಇರುತ್ತವೆ. ಇವು ಮುಖ್ಯವಾಗಿ ಧಮನಿಗಳನ್ನು ಕುಗ್ಗಿಸುವುದರಿಂದ ರಕ್ತದ ಒತ್ತಡವೇರಿಸಿ, ಗುಂಡಿಗೆಯ ಚೋದನೆಯಿಂದ ಬಡಿತದ ವೇಗವೇರಿಸುತ್ತವೆ. ಆಗ ಗುಂಡಿಗೆಯಿಂದ ರಕ್ತದ ಹೊರಹೊಮ್ಮಿಕೆ (ಔಟ್ಪುಟ್) ಏರುತ್ತದೆ. ಮೈಯಲ್ಲಿನ ಉಳಿದೆಲ್ಲ ಧಮನಿಗಳನ್ನು ಕುಗ್ಗಿಸಿದರೂ ಗುಂಡಿಗೆಯ ಕಿರೀಟಿಕ (ಕಾರೊನೆರಿ) ಧಮನಿಗಳನ್ನು ಮಾತ್ರ ಹಿಗ್ಗಿಸುತ್ತವೆ. ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಅಡ್ರಿನಲಿನ್ ಹೆಚ್ಚಿಸುತ್ತದೆ. ಅಲ್ಲದೆ, ಗೂರಲಿನಲ್ಲಿ ಪಂಗುಸಿರ್ನಾಳದ ಕಿರ್ನಾಳಗಳನ್ನು ಹಿಗ್ಗಲಿಸಿ ಉಬ್ಬಸವನ್ನು ತಗ್ಗಿಸುತ್ತದೆ. ಮೈಗೆ ಬಹಳ ಪೆಟ್ಟು ಗಾಯಗಳಾದಾಗ, ದಿಗಿಲು ಗಾಬರಿಗೊಂಡಾಗ, ಯಾವುದೇ ಒತ್ತಡದಲ್ಲೂ (ಸ್ಟ್ರೆಸ್) ಅಡ್ರಿನಿನ್, ನೋರಡ್ರಿನಲಿನುಗಳ ಸುರಿಕೆ ಹೆಚ್ಚುತ್ತದೆ.

ಒಗ್ಗದಿಕೆಯ (ಅಲರ್ಜಿ) ಪ್ರತಿಕ್ರಿಯೆಗಳನ್ನು ಕೂಡಲೇ ಹೋಗಲಾಡಿಸುವುದರಲ್ಲಿ ಅಡ್ರಿನಲಿನ್ ಹೆಸರಾಗಿದೆ.
ಅಡ್ರಿನಲ್ ಗ್ರಂಥಿಯ ಕುಸುರಿಯಲ್ಲಿ ಫಿಯೊಕ್ರೋಮೊ ಸೈಟೋಮ ಎಂಬ ಗಂತಿ ಎದ್ದಿದ್ದರೆ, ರಕ್ತ ಒತ್ತಡವೇರಿ, ಸಿಹಿಮೂತ್ರ, ಎದೆಬಡಿತ ಮುಂತಾದ ಲಕ್ಷಣಗಳು ಕಾಣಿಸಕೊಳ್ಳುತ್ತವೆ. ಈ ಗಂತಿಯನ್ನು ಶಸ್ತ್ರಕ್ರಿಯೆಯಿಂದ ಕೊಯ್ದು ತೆಗೆವುದೇ ತಕ್ಕ ಚಿಕಿತ್ಸೆ.

ಅಡ್ರಿನಲ್ ರಗಟೆ: ಇದರಲ್ಲಿ ಹುಟ್ಟುವ ಚೋದನಿಕಗಳನ್ನು ಮುಖ್ಯ ನಿಜಗೆಲಸಗಳಿಗೆ ತಕ್ಕಂತೆ ಮೂರು ಗುಂಪುಗಳಾಗಿ ವಿಂಗಡಿಸಬಹುದು. ಖನಿಜ (ಮಿನರಲೋ) ಕಾರ್ಟಿಕಾಯ್ಡು ಗಳು, ಸಕ್ಕರೆ (ಗ್ಲೂಕೊ) ಕಾರ್ಟೆಕಾಯ್ಡುಗಳು, ಲೈಂಗಿಕ ಚೋದನಿಕಗಳು. ಖನಿಜ ಕಾರ್ಟಿಕಾಯ್ಡುಗಳಲ್ಲಿ ಅಲ್ಡೊಸ್ಟಿರೋನೇ ಮುಖ್ಯವಾದದ್ದು, ಪೊಟ್ಯಾಸಿಯಂ ಅಯಾನುಗಳ ಪ್ರಮಾಣವನ್ನು ಮೈಯಲ್ಲಿರುವ ಸೋಡಿಯಂ ಎಂದಿನ ಸಮಮಟ್ಟದಲ್ಲಿ ಇರಿಸುವುದರಲ್ಲಿ ನೆರವಾಗುತ್ತದೆ. ಮುಖ್ಯವಾಗಿ ಮೂತ್ರ ಪಿಂಡದೊಳಗಿನ ಕಿರ್ನಾಳಗಳು ಸೋಡಿಯಮ್ಮನ್ನು ಹಿಡಿದಿಟ್ಟುಕೊಳ್ಳುವುದನ್ನೂ ಪೊಟ್ಯಾಸಿಯಮ್ಮನ್ನು ಬಿಟ್ಟುಬಿಡುವುದನ್ನೂ ಚೋದಿಸುತ್ತದೆ. ಮೈಯಲ್ಲಿ ಸೋಡಿಯಂ ಮಿತಿಮೀರಿ ಸೇರಿದರೆ ಮೈಯಲ್ಲಿ ಮತ್ತಷ್ಟು ನೀರು ಸೇರಿಕೊಳ್ಳವುದು.

ಅಡ್ರಿನಲ್ ರಗಟೆ ಸುರಿಸುವ ಸಕ್ಕರೆ ಕಾರ್ಟೆಕಾಯ್ಡುಗಳಲ್ಲಿ ಕಾರ್ಟಿನಾಲ್, ಕಾರ್ಟಿಕೊಸ್ಪಿ ರೋನ್ ಮುಖ್ಯವಾದುವು. ಈ ಗುಂಪಿನ ಚೋದನಿಕಗಳು ಹಿಟ್ಟು ಸಕ್ಕರೆ, ಪ್ರೋಟೀನು, ಕೊಬ್ಬುಗಳ ಜೀವವಸ್ತುಕರಣದ ಮೇಲೆ ಪ್ರಭಾವಿಗಳು. ಹಿಟ್ಟು ಸಕ್ಕರೆಗಳ ಜೀವ ವಸ್ತುಲಯವನ್ನು ತಗ್ಗಿಸಿ, ಪ್ರೋಟೀನುಗಳನ್ನು ಏರಿಸುತ್ತವೆ. ನವಸಕ್ಕರೆ ಜನನವನ್ನು ಹೆಚ್ಚಿಸುತ್ತವೆ. ಇದರಿಂದಾಗಿ, ರಕ್ತದಲ್ಲಿನ ಪ್ರಮಾಣವೇರುತ್ತದೆ. ಮೊಗ, ಹೊಟ್ಟೆ, ಬೆನ್ನಿನ ಮೇಲುಗಡೆ ಕೊಬ್ಬುಗೂಡುತ್ತದೆ. ಈ ಭಾಗಗಳ ಹೊರತಾಗಿ ಬೇರೆಡೆಗಳಲ್ಲಿ ಕೂಡಿರುವ ಕೊಬ್ಬೆಲ್ಲ ಕೊಬ್ಬಿನಾಮ್ಲಗಳಾಗಿ ಕರಗುತ್ತದೆ. ಇವು ಮತ್ತೆ ವಿಷಕಾರಕಗಳಾದ ಕೀಟೋನು ವಸ್ತುಗಳಾಗಿ (ಕೀಟೋನ್ ಬಾಡೀಸ್) ಬದಲಾಗುವುವು. ಅಲ್ಲದೆ, ರಕ್ತದಲ್ಲಿ ಬಿಳಿ ರಕ್ತಕಣಗಳಾದ ಇಯೋಸಿನೊಫಿಲುಗಳನ್ನೂ ಹಾಲುರಸಕಣಗಳನ್ನೂ (ಲಿಂಪೊಸೈಟ್ಸ್‌) ತಗ್ಗಿಸುತ್ತವೆ. ಈ ಚೋದನಿಕಗಳನ್ನು ಚಿಕಿತ್ಸೆಯಲ್ಲಿ ಬಹುವಾಗಿ ಎಲ್ಲೆಲ್ಲೊ ಬಳಸುತ್ತಿರುವುದು ಮುಖ್ಯವಾಗಿ ಇವು ಗಾಯ, ಪೆಟ್ಟು, ಸೋಂಕು, ರೋಗಗಳಿಂದೇಳುವ ಉರಿತವನ್ನು (ಇನ್ಫ್ಲಮೇಷನ್) ತಗ್ಗಿಸಲು. ಅಲ್ಲದೆ ಇವನ್ನು ಕೊಡುತ್ತಿರುವಾಗ ಒಗ್ಗದಿಕೆಯ ಪ್ರತಿಕ್ರಿಯೆಗಳನ್ನೂ ಚೆನ್ನಾಗಿ ಅಡಗಿಸುತ್ತದೆ. 
ಶಸ್ತ್ರಕ್ರಿಯೆಯೇ ಮುಂತಾದ ಯಾವುದಾದರೂ ಒತ್ತಡಕ್ಕೆ ಮೈ ಸಿಲುಕಿದಾಗ ಖನಿಜ ಅಲ್ಲದೆ ಸಕ್ಕರೆ ಕಾರ್ಟಿಕಾಯ್ಡುಗಳು ಹೆಚ್ಚಾಗಿ ಸುರಿದು ಆ ಕಷ್ಟಸ್ಥಿತಿಯನ್ನು ಎದುರಿಸಲು ನೆರವಾಗುತ್ತವೆ.

ತೆಮಡಿಕದಲ್ಲಿ ಗಂತಿಯೆದ್ದಾಗ ಆಗುವಂತೆ, ಅಡ್ರಿನಲ್ ರಗಟೆಯಲ್ಲಿ ಎದ್ದಾಗಲೂ ಈ ಗ್ರಂಥಿಭಾಗ ಚುರುಕೇರಿದಾಗ ಕಷಿಂಗನ ರೋಗ ತಲೆದೋರುವುದು. ಆಗ ಪ್ರೋಟೀನುಗಳು ಬಹಳವಾಗಿ ಹಾಳಾಗಿ ಮೈತೂಕವಿಳಿದು, ಚರ್ಮ ಚರ್ಮದಡಿಯ ಊತಕಗಳು ಸಮೆದು ತೆಳುವಾಗುತ್ತವೆ. ಕೊಬ್ಬುಗೂಡುವುದರಿಂದ ರೋಗಿ ಚಂದ್ರಮುಖನಾಗುವನು (ಮೂನ್ ಫೇಸ್). ಸಿಹಿಮೂತ್ರದ ಲಕ್ಷಣಗಳು ತೋರುವುವು. ರಕ್ತದ ಒತ್ತಡವೇರುವುದು. ಉರಿತದ ಪ್ರತಿಕ್ರಿಯೆಯನ್ನು ಅಡಗಿಸುವುದರಿಂದ ಗಾಯ, ಪೆಟ್ಟುಗಳು ವಾಸಿಯಾಗುವುದೂ ಇಲ್ಲ. ಕಲೆಗಟ್ಟಾಗುವುದೂ ಇಲ್ಲ.
ರೋಗ ಹತ್ತಿ ಈ ಗ್ರಂಥಿಭಾಗ ಹಾಳಾದರೆ, ಚೋದನಿಕಗಳ ಕೊರೆಯಾಗಿ ಅಡಿಸನ್ನನ ರೋಗ (ನೋಡಿ- ಅಡಿಸನ್ನನ-ರೋಗ) ಬರುತ್ತದೆ. ಮೂತ್ರದಲ್ಲಿ ಸೋಡಿಯಂ ಉಪ್ಪಾಗಿ ಹೆಚ್ಚಾಗಿ ಹೊರಬೀಳುವುದು. ರಕ್ತದ ಒತ್ತಡ ಕುಸಿದು, ರಕ್ತಸಕ್ಕರೆಯ ಮಟ್ಟವೂ ಇಳಿಯಬಹುದು. ರೋಗಿ ನಿತ್ರಾಣಿಯಾಗುತ್ತಾನೆ. ಬಾಯಿ ಒಳಭಾಗ ಕಪ್ಪಿಡುತ್ತದೆ.

ಕಾನ್ನ ಲಕ್ಷಣಕೂಟದ ರೋಗದಲ್ಲಿ ಖನಿಜಕಾರ್ಟಿಕಾಯ್ಡುಗಳ ಸುರಿಕೆ ಹೆಚ್ಚಿರುವುದು. ಮೈಯಲ್ಲಿ ಊತಕಗಳ ರಸಗಳಲ್ಲಿ ಸೋಡಿಯಂ ಪ್ರಮಾಣವೇರಿ, ಪೊಟ್ಯಾಸಿಯಂ ಮಟ್ಟ ಇಳಿಯುತ್ತದೆ, ರಕ್ತದ ಒತ್ತಡವೇರುವುದು. ಮೂತ್ರಶಂಕೆ (ಪಾಲಿಯೂರಿಯ), ಎಡೆಸೆಡೆತಗಳು ಆಗುತ್ತವೆ.
ಸಕ್ಕರೆಕಾರ್ಟಿಕಾಯ್ಡುಗಳ ಸುರಿತ ಬಹುಮಟ್ಟಿಗೆ ತೆಮಡಿಕದ ಮುಂದಣ ಹಾಲೆಯಲ್ಲಿ ಸುರಿವ ಅಡ್ರಿನಲ್ ರಗಟೆ ಚೋದಕ ಚೋದನಿಕದ (ಎಸಿಟಿಎಚ್) ಹತೋಟಿಯಲ್ಲಿರುವುದು. ಆದರೆ ಖನಿಜಕಾರ್ಟಿಕಾಯ್ಡುಗಳ ಮೇಲೆ ಅಷ್ಟಾಗಿಲ್ಲ. ಈ ಚೋದನಿಕಗಳ ಸುರಿತ ಮುಖ್ಯವಾಗಿ ಜೀವಕಣ ಹೊರದ್ರವದ (ಎಕ್ಸ್‌ಟ್ರ ಸೆಲ್ಲುಲಾರ್) ಘನ ಗಾತ್ರಕ್ಕೆ ತಕ್ಕಂತಿರುವುದು. ಈ ದ್ರವದ ಪ್ರಮಾಣ ಇಳಿದಾಗ ಮೂತ್ರಪಿಂಡದಲ್ಲಿ ರೆನಿನ್ ಸುರಿಯುತ್ತದೆ. ರಕ್ತದಲ್ಲಿರುವ ರಕ್ತನಾಳ ಬಿಳಪಿಕ ಜನಕವನ್ನು (ಆಂಜಿಯೊಟೆನ್ಸಿನೋಜನ್) ರಕ್ತನಾಳಬಿಗುಪಿಗ 1 (ಆಂಜಿಯೊಟೆನ್ರಿನ್ 1) ಆಗಿ ಬದಲಿಸುವುದು. ರಕ್ತದಲ್ಲಿ ಕೆಲವು ದೊಳೆಗಳು ಇದನ್ನು ರಕ್ತನಾಳ ಬಿಳುಪಿಗೆ 2 ಆಗಿಸುತ್ತದೆ. ಈ ವಸ್ತು ಅಡ್ರಿನಲ್ ರಗಟೆಯನ್ನು ಚೋದಿಸಿ ಅಲ್ಡೊಸ್ಪಿರೋನನ್ನು ಸುರಿವಂತೆ ಮಾಡುವುದು. ಇದರಿಂದ ಮೈಯಲ್ಲಿನ ಸೋಡಿಯಂ ಪ್ರಮಾಣ ಏರುವುದರಿಂದ ಜೀವಕಣ ಹೊರದ್ರವವೂ ಹೆಚ್ಚಿ ಮೈಯೆಲ್ಲ ಉಬ್ಬರಿಸಿಕೊಳ್ಳುತ್ತದೆ.

ಡೈಹೈಡ್ರೊ ಎಪಿ ಆಂಡ್ರೊಸ್ಟಿರೋನ್ : ಬೆದೆಜನಕಗಳನ್ನು ಈ ಗ್ರಂಥಿಭಾಗ ಕೊಂಚವಾಗಿ ಸುರಿಸುತ್ತದೆ. ಆದ್ದರಿಂದ ಜನನಾಂಗಗಳ ಮೇಲೆ ಇವುಗಳ ಪ್ರಭಾವ ಎದ್ದುತೋರದು. ಆದರೂ ಕೆಲವು ರೋಗಗಳಲ್ಲಿ ಇವು ಮಿತಿಮೀರಿ ಸುರಿಯುತ್ತಿದ್ದರೆ. ಜನನಾಂಗಗಳಲ್ಲಿ ಬದಲಾವಣೆಗಳು ತೋರುವುವು. ಇಂಥದಕ್ಕೆ ಅಡ್ರಿನಲ್ ಜನನಾಂಗ ಲಕ್ಷಣಕೂಟ (ಅಡ್ರಿನೊಜನೈಟಲ್ ಸಿಂಡ್ರೋಂ) ಎಂದು ಹೆಸರಿದೆ. ಈ ತೆರನ ಒಂದು ರೋಗದಲ್ಲಿ ಹುಡುಗನಲ್ಲೂ ಜನನಾಂಗಗಳು ದೊಡ್ಡವರಲ್ಲಿರುವ ಪರಿಮಾಣದಲ್ಲಿ ಬೆಳಯುತ್ತವೆ. ಇನ್ನೊಂದು ರೋಗವಾದ ಅಡ್ರಿನಲ್ ಗಂಡುತನದಲ್ಲಿ (ವಿರಿಲಿಸಂ) ಹೆಂಗಸು ಗಂಡಸಿನ ರೂಪಕ್ಕೆ ಬದಲಾಗುತ್ತಾಳೆ.

ತರಡುಗಳು: ಇವುಗಳಲ್ಲಿ ರೇತುಕಣಗಳು ವಿಕಸಿಸುವವಲ್ಲದೆ, ಗಂಡಿನ ಚೋದನಿಕವಾದ ಪುಲ್ಲಿಂಗಕಾರಿಯೂ ಹುಟ್ಟುವುದು. ಗಂಡುಲಿಂಗದ ಚೋದನಿಕಗಳಿಗೆ ಪುಂಜನಿಕಗಳೆಂದೂ (ಆಂಡ್ರೊಜನ್ಸ್‌) ಹೆಸರಿದೆ. ಹುಡುಗ ಬೆಳೆಯುತ್ತ ವಯಸ್ಸಿಗೆ ಬಂದ ಹಾಗೆಲ್ಲ ಪುಲ್ಲಿಂಗಕಾರಿಯಿಂದ ಮರುಚಲದ ಲಿಂಗ ಗುಣಗಳು ಚೆನ್ನಾಗಿ ಹೊರದೋರುತ್ತವೆ. ಅಂದರೆ ಹೊರಗಾಣುವ ಜನನಾಂಗಗಳು ಚೆನ್ನಾಗಿ ಬೆಳೆದು, ಮುನ್ನಿಲುಗ (ಪ್ರಾಸ್ಟೇಟ್), ರೇತು ಕಿಗ್ಗೋಶಗಳ (ಸೆಮಿನಲ್ ವೆಸಿಕಲ್ಸ್‌) ಗ್ರಂಥಿಗಳು ಬೆಳೆದು ಕಂಕುಳು, ಗಜ್ಜಲು, ತೊಡೆಸಂದುಗಳಲ್ಲಿ ಕೂದಲೂ ಗಡ್ಡ ಮೀಸೆಗಳೂ ಬೆಳೆವುವು. ಗಂಟಲೊಡೆದು ದನಿ ಗಡುಸಾಗುವುದು. ಈ ಚೋದನಿಕದಿಂದ ಜೀವವಸ್ತುಚಯದ ಪರಿಣಾಮ ತೋರುತ್ತದೆ. ಸ್ನಾಯುಗಳು, ಒಳಾಂಗಗಳು, ಮೂಳೆಗಳೇ ಮುಂತಾದವು ಚೆನ್ನಾಗಿ ಬೆಳೆದು ಮೈ ತುಂಬಿಕೊಳ್ಳುವುದು. ಇದರಿಂದಲೇ ಹೆಂಗಸರಿಗಿಂತಲೂ ಗಂಡಸಿನ ಮೈ ಬೆಳೆವಣಿಗೆ ಜೋರಾಗಿದ್ದು ಮೈಕಟ್ಟು ಗಟ್ಟಿಮುಟ್ಟಾಗುತ್ತದೆ. ಈ ಚೋದನಿಕದ ಸುರಿತ ಕೂಡ ತೆಮಡಿಕದ ಮುಂದಣ ಹಾಲೆ ಸುರಿಸುವ ಹಳದಿಂಡುಗೊಳಿಕ ಚೋದನಿಕದ ಅಂಕೆಯಲ್ಲಿರುವುದು. ಆದ್ದರಿಂದ ಅಂಕೆಗೊಳಿಸುವ ಈ ಚೋದನಿಕಕ್ಕೆ ಊತಕಾಂತರ ಕಣಚೋದಕ ಚೋದನಿಕ ಎನ್ನುವುದೂ ಉಂಟು.

ರೇತುಕಣಗಳ ಹುಟ್ಟು ತೆಮಡಿಕದ ಕೋಶಿಕ ಚೋದಕ ಚೋದನಿಕದ ಅಂಕೆಯಲ್ಲಿದ್ದರೂ ಇದರೊಂದಿಗೆ ಪುಲ್ಲಿಂಗಕಾರಿಯೂ ಬೇಕು.
ಪುಲ್ಲಿಂಗಕಾರಿಯ ಕೊರೆಯ ಮುಖ್ಯ ಕಾರಣಗಳು, ತೆಮಡಿಕದ ರೋಗ, ಇಲ್ಲವೇ ಊತಕಾಂತರ ಜೀವಕಣಗಳು ಕೆಲವು ಕೆಡುವುದು. ಎಳೆತನದಲ್ಲೇ ಕೊರೆಯಾದರೆ, ಆಮೇಲಿನ ಗಂಡಸಿನ ಗುಣಗಳು ಬೆಳೆದು ತೋರವು. ಬೆಳೆದವರಲ್ಲಿ ಹೀಗಾದರೆ, ಜನನಾಂಗಗಳು ಕೊಂಚಮಟ್ಟಿಗೆ ಕುಂದಬಹುದು. ಆಗ ಪುಲ್ಲಿಂಗಕಾರಿಯನ್ನು ಕೊಟ್ಟರೆ ಗುಣಕಾರಿ. 

ಅಂಡಾಶಯಗಳು : ಮುಟ್ಟಿನ ಮಾಸಕ್ಕೊಂದು ಬಾರಿ ಸಾಮಾನ್ಯವಾಗಿ ಒಂದೊಂದು ಅಂಡಾಣು ವಿಕಾಸವಾಗಿ ನೆರೆದು ಇವುಗಳಿಂದ ಹೊರಬೀಳುವುದು. ಅಂಡಾಶಯದಲ್ಲಿ ಹುಟ್ಟುವ ಚೋದನಿಕಗಳು ಎರಡು; ಬೆದೆಜನಕ, ಬಸಿರಣಿಕ (ಪ್ರೊಜೆಸ್ಟಿರಾನ್). ಬೆದೆಜನಕದ ಹಾಗೇ ವರ್ತಿಸುವ ಹಲವಾರು ವಸ್ತುಗಳು ಮೈಯಲ್ಲಿನ ರಸಗಳಲ್ಲಿವೆ. ಅಂಡಾಶಯದಲ್ಲಿ ಹುಟ್ಟುವ ಬೆದೆಜನಕಕ್ಕೆ ಈಸ್ಟ್ರಾಡಿಯೋಲ್ ಎಂದಿದೆ. ಇದರಿಂದ ತಯಾರಾಗುವುವು ಈಸ್ಪ್ರಿಯೋಲ್, ಈಸ್ಟ್ರೋನುಗಳು, ಗರ್ಭಕೋಶ, ಗರ್ಭನಾಳಗಳು, ಯೋನಿ, ಮೊಲೆಗಳ ಬೆಳೆವಣಿಗೆಗೆ ಬೆದೆಜನಕ ಇದ್ದೇ ಇರಬೇಕು. ಹೆಣ್ಣಿನ ಜನನಾಂಗಗಳು ಚೆನ್ನಾಗಿ ಬೆಳೆಯಲು ಬಸಿರಣಿಕವೂ ಬೇಕು.

ಮುಟ್ಟಿನ ಚಕ್ರಕ್ಕೆ ತಕ್ಕಹಾಗೆ ಇವೆರಡು ಚೋದನಿಕಗಳ ಸುರಿತದಲ್ಲೂ ಏರಿಳಿತಗಳಾ ಗುತ್ತವೆ. ಮುಟ್ಟಿನ ತಿಂಗಳಲ್ಲಿ ಸರಾಸರಿಯಾಗಿ 28 ದಿನಗಳಿರುತ್ತವೆ. ಮುಟ್ಟು ಸುರಿಯಲಿಟ್ಟ ಮೇಲಿನ ಮೊದಲಿನ 4-5 ದಿನಗಳಲ್ಲಿ ಗರ್ಭದೊಳಪೊರೆ (ಎಂಡೊಮೆಟ್ರಿಯಂ) ಕಿತ್ತು ಹರಿದುಕೊಂಡು ರಕ್ತದೊಂದಿಗೆ ಹೊರಬೀಳುತ್ತದೆ. ಅದೇ ಮುಟ್ಟು ಎನಿಸಿಕೊಳ್ಳುವುದು. ಆ ಹೊತ್ತಿಗೆ ಕೋಶಿಕಚೋದಕ ಚೋದನಿಕವನ್ನು ತೆಮಡಿಕ ಸುರಿಸಲು ಮೊದಲಿಡುವುದು. ಇದರ ಪ್ರಭಾವದಿಂದ ಗ್ರಾಫನ ಕೋಶಿಕವೊಂದು ಬೆಳೆದು ವಿಕಾಸವಾಗಿ ಬೆದೆಜನಕವನ್ನು ಸುರಿಸುತ್ತದೆ. ಕಿತ್ತುಹೋದ ಗರ್ಭದೊಳಪೊರೆಯನ್ನು ಮುಟ್ಟಿನ ಮಾಸದ ಮೊದಲ 14 ದಿನಗಳ ತನಕ ಮತ್ತೆ ಬೆಳೆಸುವುದು ಈ ಬೆದೆಜನಕವೇ. ಸರಾಸರಿ 14ನೆಯ ದಿನದ ಹೊತ್ತಿಗೆ ಗ್ರಾಫನ ಕೋಶಿಕ ಒಡೆದು ಅದರೊಳಗಿದ್ದ ನೆರೆದ ಅಂಡಾಣು ಹೊರಬೀಳುವುದು ಒಡೆದುಹೋದ ಈ ಕೋಶಿಕದ ಜಾಗದಲ್ಲಿ ಹಳದಿಂಡು ಕಟ್ಟಿಕೊಂಡು ಬೆಳೆಯುತ್ತ ಬಸಿರಣಿಕವನ್ನು ಸುರಿಬಿಡುತ್ತದೆ. ಅಂಡಾಣು ಬಿಡುಗಡೆ, ಹಳದಿಂಡಿನ ರಚನೆಯೂ ನಿಜಗೆಲಸಗಳೂ ತೆಮಡಿಕದ ಹಳದಿಂಡುಗೊಳಿಕ ಚೋದನಿಕದ ಅಂಕೆಯಲ್ಲಿರುವುವು. ಗರ್ಭದೊಳಪೊರೆಯಲ್ಲಿ ಗ್ರಂಥಿಗಳು ಹುಲುಸಾಗಿ ಬೆಳೆದು ರಸದುಂಬಲು ಮುಖ್ಯಕಾರಣ ಬಸಿರಣಿಕ. ಅಂದರೆ, ಇದು ಗರ್ಭಕೋಶವನ್ನು ಬಸಿರಿಗಾಗಿ ಅಣಿ ಮಾಡುವುದು. ಹೆಂಗಸು ಆಗ ಬಸಿರಾದರೆ, ಹಳದಿಂಡು ಬಸಿರಣಿಕವನ್ನು ಸುರಿಸುತ್ತಲೇ ಇರುವುದು. ಬಸಿರಾಗದಿದ್ದಲ್ಲಿ 28 ದಿನಗಳಾದ ಮೇಲೆ ಹಳದಿಂಡು ಒಣಗಿ ಸವೆಯುತ್ತದೆ. ಹೀಗೆ ಒಣಗಿದಾಗ ಬಸಿರಣಿಕ ಇಲ್ಲದಂತಾಗಿ, ಗರ್ಭದೊಳಪೊರೆ ಕಿತ್ತುಬಂದು ಮುಟ್ಟು ಹೊರಗಾಣಿಸುವುದು. ಹೀಗೆ ಮುಟ್ಟಿನ ಚಕ್ರ ನಡೆಯುತ್ತಿರುವುದು.
ಹೆಣ್ಣಿನಲ್ಲಿ ಅಂಡಾಂಶಯಗಳ ಕೆಲಸಗೆಟ್ಟರೆ ಹೆಣ್ಣಿನ ಹೆಚ್ಚಿನ ಗುಣಗಳು ಹೊರಗಾಣದೆ, ಜನನಾಂಗಗಳೂ ಬೆಳೆಯದೆ ಎಳಸಾಗೇ ಉಳಿವುವು. ಅಂಡಾಶಯಕ್ಕೆ ತಾಕುವ ರೋಗಗಳು, ತೆಮಡಿಕದ ಚೋದನಿಕಗಳ ಕೊರೆಯಿಂದ ಹೀಗಾಗಬಹುದು. 45 ವಯಸ್ಸಿನ ಸುಮಾರಿನಲ್ಲಿ ಅಂಡಾಶಯಗಳು ಅಂಡಾಣುಗಳ ತಯಾರಿಕೆಯನ್ನು ನಿಲ್ಲಿಸಿಬಿಡುತ್ತವೆ. ಹೀಗಾದಾಗ, ಗರ್ಭಕೋಶ, ಯೋನಿ ಬರುಬರುತ್ತ ಸವೆಯುತ್ತವೆ. ಹೆರಿಗೆ ಹೊತ್ತಿನಲ್ಲಿ ಕಿಳ್ಗುಳಿ (ಪೆಲ್ವಿಸ್) ಮೂಳೆಗಳನ್ನು ಕಟ್ಟಿಡುವ, ತಂತುಗಟ್ಟುಗಳನ್ನು ಸಡಿಲಗೊಳಿಸುವ, ರಿಲ್ಯಾಕ್ಸಿನ್ ಎಂಬ ಚೋದನಿಕವನ್ನು ಅಂಡಾಶಯಗಳು ಸುರಿಬಿಡುವುವೆಂಬ ನಂಬಿಕೆಯಿದೆ. ಹೆರಿಗೆಯಲ್ಲಿ ಪಿಂಡಗೂಸು ಅಪಾಯವಿಲ್ಲದಂತೆ ಹೊರಬರುವಂತೆ ಗರ್ಭಕೋಶವನ್ನು ಹಿಗ್ಗಲಿಸುವುದೂ ಗರ್ಭಕೊರಳನ್ನು (ಸರ್ವಿಕ್ಸ್‌) ಮೆತುಗೊಳಿಸುವುದೂ ರಿಲ್ಯಾಕ್ಸಿನ್ನಿನ ಕೆಲಸವೇ.
ಮಾಸು: ಪಿಂಡಗೂಸನ್ನು ಕಾಪಿಡಲು ಬೆಳೆಯುತ್ತಿರುವ ಗರ್ಭಕೋಶದ ಮಾಸುವಿನ ಜನನಗ್ರಂಥಿಚೋದಕ (ಗೊನಾಡೊಟ್ರೋಪಿಕ್) ಚೋದನಿಕಗಳೂ ಲಿಂಗಚೋದಕ ಚೋದನಿಕಗಳೂ ಹುಟ್ಟುತ್ತವೆ. ಇದರ ಚೋದನಿಕಗಳಿಗೆ ಜರಾಯುವಿನ (ಕೋರಿಯಾನಿಕ್) ಜನನಗ್ರಂಥಿ ಚೋದಕಗಳೆಂದು ಹೆಸರಿದೆ. ಗಂಡಸಲ್ಲಿ ಇದು ಹಳದಿಂಡುಗೊಳಿಕ ಚೋದನಿಕವನ್ನು ಹೋಲುವುದು. ಮಾಸುವಿನಿಂದಾಗಿ, ಬಸಿರಿನ ಮೊದಲಲ್ಲಿ ಹಳದಿಂಡು ಸವೆಯದೆ ಹಾಗೇ ಉಳಿವುದು. ಮಾಸು ಸುರಿಸುವ ಬಸಿರಣಿಕ ಬೆದೆಜನಕ ಚೋದನಿಕಗಳ ಸುರಿಕೆಗಳಿಂದ ಗರ್ಭಕೋಶ, ಮೊಲೆಗಳು ಚೆನ್ನಾಗಿ ಬೆಳೆಯುತ್ತವೆ, ಆದ್ದರಿಂದಲೇ, ಮಾಸು ಸಾಕಷ್ಟು ಬೆಳೆದ ಮೇಲೆ, ಅಂದರೆ 4-5 ತಿಂಗಳ ಬಸುರಿನಲ್ಲಿ, ಅಂಡಾಶಯಗಳನ್ನು ತೆಗೆದು ಹಾಕಿದರೂ ಗರ್ಭದಲ್ಲಿರುವ ಪಿಂಡಗೂಸಿಗೆ ಅಪಾಯ ತಾಕದು.

ಉಳಿದವು: ಮೇಲೆ ಹೇಳಿದವಲ್ಲದೆ, ಬೇರೆ ಕೆಲವು ಗ್ರಂಥಿಗಳೂ ಒಳಸುರಿಕೆ ಗ್ರಂಥಿಗಳ ಹಾಗೇ ವರ್ತಿಸುತ್ತವೆ. ಮಿದುಳಲ್ಲಿರುವ ಕೆಳತಲೆಯರೆ ಇಂಥದೊಂದು. ವಿಮೋಚಕ ಅಂಶಗಳನ್ನು ರಕ್ತದೊಳಕ್ಕೆ ಸುರಿಸಿ ತೆಮಡಿಕದ ಮುಂದಣ ಹಾಲೆಯನ್ನು ನಿಯಂತ್ರಿಸುವುದು ಅಲ್ಲದೆ ಹಿಂದಣ ಹಾಲೆಯ ಚೋದನಿಕಗಳು ಈ ಅಂಗಭಾಗದ ನಡುಬೀಜ ತಂಡದಲ್ಲೇ ಹುಟ್ಟಿ ಕೆಳಗಿಳಿದು ಸಾಗುತ್ತವೆ.

ಮೂತ್ರಪಿಂಡಗಳಲ್ಲಿ ಗೊಂಡೆಬದಿಯ ರಚನೆಯಲ್ಲಿ (ಜಕ್ಸ್‌ಟಗ್ಲೊಮೆರುಲಾರ್ ಆಪರೇಟಸ್) ರೆನಿನ್ ಎಂಬ ವಸ್ತು ತಯಾರಾಗುವುದು. ಮೇಲೆ ತಿಳಿಸಿರುವಂತೆ, ಇದು ಆಲ್ಡೋಸ್ಟಿರೋನ್ ಚೋದನಿಕದ ಸುರಿತವನ್ನು ಅಂಕೆಗೊಳಿಸುತ್ತದೆ. ಆಮ್ಲಜನಕಿಳಿತದಲ್ಲಿ (ಹೈಪಾಕ್ಸಿಯ) ಮೂತ್ರಪಿಂಡಗಳು ರಕ್ತವಿಕಾಸವೆಂಬ (ಹೀಮೊಪಾಯಿಟಿನ್) ವಸ್ತುವನ್ನು ಸುರಿಸುವುವು. ಇದರಿಂದ ಕೆಂಪು ರಕ್ತಕಣಗಳ ಹುಟ್ಟು ಹೆಚ್ಚುತ್ತದೆ.
ದಾರುಸಂಕದ (ಪೈನಿಯಲ್) ಗ್ರಂಥಿ ಕರ್ವಣ್ಣಬಿಗುಪ (ಮೆಲಟೋನಿನ್) ಚೋದನಿಕವನ್ನು ಸುರಿಸಬಹುದು. ಇದು ಕಪ್ಪೆಗಳ ಚರ್ಮವನ್ನು ಬಿಳಿಚಿಸುತ್ತದೆ. 

ಓಮೊಗ್ಗು (ತೈಮಸ್) ಗ್ರಂಥಿಯೂ ತೊರಳೆಯೂ (ಪ್ಲೀಹ) ಕೆಲವು ಸುರಿಕೆಗಳನ್ನು ಸುರಿಸಬಹುದು (ನೋಡಿ- ಒಳಸುರಿಕ-ಗ್ರಂಥಿಗಳು).	(ಎಂ.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ